ಸಾಗರ : ಶಿವಮೊಗ್ಗದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಹಾವು ಕಚ್ಚಿ ಆರು ತಿಂಗಳ ಗರ್ಭಿಣಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳಗೋಡು ಗ್ರಾಮದಲ್ಲಿ ನಡೆದಿದೆ. ಸುಳಗೋಡು ಗ್ರಾಮದ ವೀರಭದ್ರ ಎಂಬುವವರ ಪತ್ನಿ ಸ್ವಾತಿ (26) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಸ್ವಾತಿ ಆರು ತಿಂಗಳ ಗರ್ಭಿಣಿಯಾಗಿದ್ದರು. ಶನಿವಾರ ಮಧ್ಯಾಹ್ನ ಸುಮಾರು 3:30ರ ವೇಳೆಗೆ ಸುಳಗೋಡು ಗ್ರಾಮದಲ್ಲಿ ಶುಂಠಿ ಕೆಲಸಕ್ಕೆ ತನ್ನ ಪತಿ ಹಾಗೂ ಇತರ ಕೂಲಿ ಕಾರ್ಮಿಕರೊಂದಿಗೆ ಹೋಗಿದ್ದರು. ಕೆಲಸದ ನಡುವೆ ಎಲ್ಲರೂ ಊಟ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸ್ವಾತಿ ಅವರ ಬಲಗಾಲಿನ ಮೊಣಕಾಲಿಗೆ ವಿಷಪೂರಿತ ಹಾವು ಕಚ್ಚಿದೆ. ತಕ್ಷಣವೇ ಅವರನ್ನು ಚಿಕಿತ್ಸೆಗಾಗಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.








