ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಮರದ ಭೀತಿ ಮತ್ತೆ ತಾರಕಕ್ಕೇರಿದೆ. ಇರಾನ್‌ನ ಹೊಸ ರಾಜತಾಂತ್ರಿಕ ಪ್ರಸ್ತಾವನೆಯನ್ನು ತಾವು ಪರಿಶೀಲಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆಯಾದರೂ, “ಟೆಹ್ರಾನ್ ಏನಾದರೂ ಅಶಿಸ್ತು ತೋರಿದರೆ ಮತ್ತೊಮ್ಮೆ ಭೀಕರ ವೈಮಾನಿಕ ದಾಳಿ ಎದುರಿಸಬೇಕಾಗುತ್ತದೆ” ಎಂದು ಬಲವಾದ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಸಲ್ಲಿಸಿರುವ ಹೊಸ ಸಂಧಾನದ ಪ್ರಸ್ತಾವನೆಯನ್ನು ತಾವು ವೈಯಕ್ತಿಕವಾಗಿ ಪರಿಶೀಲಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಇದು ಯುದ್ಧವನ್ನು ತಪ್ಪಿಸಲು ಇರುವ ಕೊನೆಯ ಅವಕಾಶ ಎಂಬಂತೆ ಬಿಂಬಿತವಾಗಿದೆ.
“ಇರಾನ್ ಯಾವುದೇ ತಪ್ಪು ಹೆಜ್ಜೆ ಇಟ್ಟರೂ ಅಥವಾ ನಮ್ಮ ಹಿತಾಸಕ್ತಿಗಳ ಮೇಲೆ ದಾಳಿ ಮಾಡಿದರೆ, ನಾವು ಸುಮ್ಮನಿರುವುದಿಲ್ಲ. ಅಮೆರಿಕದ ದಾಳಿಗಳು ಹೊಸ ರೂಪದಲ್ಲಿ ಮತ್ತೆ ಪ್ರಾರಂಭವಾಗುತ್ತವೆ” ಎಂದು ಅವರು ಎಚ್ಚರಿಸಿದ್ದಾರೆ.
ಇರಾನ್ ತನ್ನ ವರ್ತನೆಯನ್ನು ತಿದ್ದಿಕೊಳ್ಳದಿದ್ದರೆ ಕಠಿಣ ಆರ್ಥಿಕ ನಿರ್ಬಂಧಗಳ ಜೊತೆಗೆ ಮಿಲಿಟರಿ ಕ್ರಮವನ್ನೂ ಎದುರಿಸಬೇಕಾಗುತ್ತದೆ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.








