ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಬೋಧನಾ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ರಾಜ್ಯ ಸರ್ಕಾರವು ‘8 ಗ್ಯಾರಂಟಿ’ಗಳನ್ನೊಳಗೊಂಡ ವಿಶೇಷ ಯೋಜನೆಯನ್ನು ಜಾರಿಗೆ ತರಲು ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಈ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಶಾಲಾ ಶಿಕ್ಷಣದಲ್ಲಿ ದೀರ್ಘಕಾಲದಿಂದ ಇರುವ ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು ಹಳೆಯ ಬೋಧನಾ ವಿಧಾನಗಳಂತಹ ಸಮಸ್ಯೆಗಳನ್ನು ನೀಗಿಸಿ, ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವಂತೆ ಸರ್ಕಾರಿ ಶಾಲೆಗಳನ್ನು ಸಜ್ಜುಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಶಿಕ್ಷಣಕ್ಕೆ ‘ಅಷ್ಟ ಗ್ಯಾರಂಟಿ’ಗಳು:
ಗ್ಯಾರಂಟಿ 1- ಶಿಕ್ಷಕರ ಕೊರತೆ ಇನ್ನಿಲ್ಲ :5ನೇ ತರಗತಿವರೆಗೆ ತರಗತಿಗೊಬ್ಬರು ಹಾಗೂ 6ನೇ ತರಗತಿಯಿಂದ ವಿಷಯಕ್ಕೊಬ್ಬರಂತೆ ಶಿಕ್ಷಕರ ನೇಮಕ
ಗ್ಯಾರಂಟಿ 2-ಪೋಷಕರು ಬಯಸುವ ಮಾಧ್ಯಮ : ಎಲ್ಲಾ ಶಾಲೆಗಳಲ್ಲೂ ಕನ್ನಡದ ಜೊತೆಗೆ ಇಂಗ್ಲಿಷ್ ಮಾಧ್ಯಮ ಲಭ್ಯ. ಇಂಗ್ಲಿಷ್ ಬೋಧನೆಗಾಗಿ ಶಿಕ್ಷಕರಿಗೆ ವಿಶೇಷ ತರಬೇತಿ
ಗ್ಯಾರಂಟಿ 3-ಉಚಿತ ಸಾರಿಗೆ ಸೌಲಭ್ಯ :ಕೆಪಿಎಸ್ ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ
ಗ್ಯಾರಂಟಿ 4-ಡಿಜಿಟಲ್ ಶಿಕ್ಷಣ : 1ನೇ ತರಗತಿಯಿಂದ ಕಂಪ್ಯೂಟರ್ ಹಾಗೂ 3ನೇ ತರಗತಿಯಿಂದಲೇ AI ಕಲಿಕೆ ; 3 ವರ್ಷಗಳಲ್ಲಿ ಎಲ್ಲಾ ಕೆಪಿಎಸ್ ಶಾಲೆಗಳಿಗೆ ಕಂಪ್ಯೂಟರ್ ಶಿಕ್ಷಕರ ನೇಮಕ
ಗ್ಯಾರಂಟಿ 5-ಕಲೆ ಮತ್ತು ದೈಹಿಕ ಶಿಕ್ಷಣ : ಸಂಗೀತ, ಕಲೆ ಮತ್ತು ದೈಹಿಕ ಶಿಕ್ಷಣಕ್ಕೆ ಪ್ರತ್ಯೇಕ ಶಿಕ್ಷಕರ ನೇಮಕ ; ಈ ವರ್ಷದಿಂದಲೇ ದೈಹಿಕ ಶಿಕ್ಷಕರ ಭರ್ತಿ ಆರಂಭ.
ಗ್ಯಾರಂಟಿ 6- ಶೈಕ್ಷಣಿಕೇತರ ಹೊರೆ ಮುಕ್ತಿ :ಶಿಕ್ಷಕರು ಬೋಧನೆಗಷ್ಟೇ ಸೀಮಿತ, ಬೋಧನೆಯ ಹೊರತಾದ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿಗಳ ನೇಮಕ.
ಗ್ಯಾರಂಟಿ 7- ಪೋಷಕರು – ಶಿಕ್ಷಕರ ಸಭೆ : ಮಗುವಿನ ಪ್ರಗತಿ ತಿಳಿಯಲು ಪಠ್ಯ ಆಧಾರಿತ ಮೌಲ್ಯಮಾಪನ ಮತ್ತು ಪ್ರತಿ ತಿಂಗಳಿಗೊಮ್ಮೆ ಕಡ್ಡಾಯ ಪೋಷಕರು-ಶಿಕ್ಷಕರ ಸಭೆ.
ಗ್ಯಾರಂಟಿ 8- ಕೌಶಲ್ಯ ಮತ್ತು ಸ್ಪರ್ಧಾತ್ಮಕ ತರಬೇತಿ : 6ನೇ ತರಗತಿಯಿಂದಲೇ ವೃತ್ತಿ ಕೌಶಲ್ಯ ಶಿಕ್ಷಣ ಮತ್ತು ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ
ಯೋಜನೆಯ ಮುಖ್ಯಾಂಶಗಳು:
ಶಿಕ್ಷಕರ ನೇಮಕ: ಪ್ರಾಥಮಿಕ ಶಾಲೆಗಳಲ್ಲಿ 5ನೇ ತರಗತಿವರೆಗೆ ಪ್ರತಿಯೊಂದು ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲು ಸರ್ಕಾರ ನಿರ್ಧರಿಸಿದೆ. 6ನೇ ತರಗತಿಯಿಂದ ವಿಷಯವಾರು ಪರಿಣತ ಶಿಕ್ಷಕರನ್ನು ನೇಮಿಸಲಾಗುವುದು.
ಇಂಗ್ಲಿಷ್ ಮಾಧ್ಯಮ: ಪೋಷಕರ ಬೇಡಿಕೆಗೆ ಸ್ಪಂದಿಸಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಲಭ್ಯವಾಗುವಂತೆ ಮಾಡಲಾಗುವುದು.
ಕರ್ನಾಟಕ ಪಬ್ಲಿಕ್ ಸ್ಕೂಲ್: ಸುಮಾರು 900 ಸರ್ಕಾರಿ ಶಾಲೆಗಳನ್ನು ‘ಕರ್ನಾಟಕ ಪಬ್ಲಿಕ್ ಸ್ಕೂಲ್’ಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದ್ದು, ಇಲ್ಲಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬೋಧನೆ ನಡೆಯಲಿದೆ.
ತಂತ್ರಜ್ಞಾನ ಮತ್ತು ಎಐ: 3ನೇ ತರಗತಿಯಿಂದ ಕೃತಕ ಬುದ್ಧಿಮತ್ತೆ (AI) ಬಗ್ಗೆ ಮೂಲಭೂತ ಅರಿವು ಮೂಡಿಸಲಾಗುವುದು.
ಶಿಕ್ಷಕರಿಗೆ ಬೋಧನೆಯೇ ಪ್ರಧಾನ: ಶಿಕ್ಷಕರು ಇನ್ನು ಮುಂದೆ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಕೊಳ್ಳುವಂತಿಲ್ಲ. ಕೇವಲ ಬೋಧನೆಗೆ ಗಮನಹರಿಸಲು ಅನುವಾಗುವಂತೆ ಆಡಳಿತಾತ್ಮಕ ಕೆಲಸಗಳಿಗೆ ಪ್ರತ್ಯೇಕ ಸಿಬ್ಬಂದಿ ನೇಮಿಸಲಾಗುವುದು.
“ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಈ ಕ್ರಮಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವುದೇ ನಮ್ಮ ಗುರಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.








