ಪ್ರಯಾಗ್‌ರಾಜ್: ಸಾರ್ವಜನಿಕ ಭೂಮಿಯನ್ನು ನಮಾಜ್ ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳಿಗಾಗಿ ಯಾವುದೇ ವ್ಯಕ್ತಿ ಅಥವಾ ಸಮೂಹವು ಪ್ರತ್ಯೇಕವಾಗಿ ಬಳಸುವಂತಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ವೀಕ್ಷಣೆ ಮಾಡಿದೆ. ಇಂತಹ ಬಳಕೆಯು ಸಾರ್ವಜನಿಕ ಸುವ್ಯವಸ್ಥೆ ಮತ್ತು ಇತರರ ಹಕ್ಕುಗಳಿಗೆ ಒಳಪಟ್ಟಿರುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಗರಿಮಾ ಪ್ರಸಾದ್ ಅವರಿದ್ದ ಪೀಠವು, “ಸಾರ್ವಜನಿಕ ಭೂಮಿಯನ್ನು ಯಾವುದೇ ಒಂದು ಪಕ್ಷವು ಧಾರ್ಮಿಕ ಉದ್ದೇಶಗಳಿಗಾಗಿ ಏಕಪಕ್ಷೀಯವಾಗಿ ಬಳಸಲು ಸಾಧ್ಯವಿಲ್ಲ. ಇಂತಹ ಆಸ್ತಿಯ ಮೇಲೆ ಎಲ್ಲಾ ವ್ಯಕ್ತಿಗಳಿಗೂ ಸಮಾನ ಹಕ್ಕಿದೆ” ಎಂದು ತಿಳಿಸಿದೆ.
ಖಾಸಗಿ ಆವರಣದಲ್ಲಿ ನಡೆಯುವ ಧಾರ್ಮಿಕ ಆಚರಣೆಗಳಿಗೆ ರಕ್ಷಣೆ ಇದೆ. ಆದರೆ ಅದನ್ನು ಸಂಘಟಿತ ಅಥವಾ ಸಾಮೂಹಿಕ ಧಾರ್ಮಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡಿಸಲು “ಸಂಪೂರ್ಣ ಸ್ವಾತಂತ್ರ್ಯ” (Absolute carte blanche) ನೀಡಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ.
ಧಾರ್ಮಿಕ ಚಟುವಟಿಕೆಗಳು ಖಾಸಗಿ ಮಿತಿಯನ್ನು ಮೀರಿ ಸಾರ್ವಜನಿಕ ಕ್ಷೇತ್ರಕ್ಕೆ ಧಕ್ಕೆ ತರಲು ಆರಂಭಿಸಿದಾಗ, ಸರ್ಕಾರದ ಮಧ್ಯಪ್ರವೇಶ ಅನಿವಾರ್ಯ ಮತ್ತು ಕಾನೂನುಬದ್ಧವಾಗಿರುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ಅರ್ಜಿದಾರರು ಹಳೆಯ ಸಂಪ್ರದಾಯವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿಲ್ಲ, ಬದಲಾಗಿ ಗ್ರಾಮದ ಒಳಗಿನ ಮತ್ತು ಹೊರಗಿನ ಜನರನ್ನು ಸೇರಿಸಿ ಹೊಸದಾಗಿ ಸಾಮೂಹಿಕ ಸಭೆಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಕೋರ್ಟ್ ಗಮನಿಸಿದೆ. ಈ ಹಿಂದೆ ಕೇವಲ ಈದ್ ಸಂದರ್ಭದಲ್ಲಿ ಮಾತ್ರ ಅಲ್ಲಿ ನಮಾಜ್ ಮಾಡಲಾಗುತ್ತಿತ್ತು, ಅದನ್ನು ಈಗ ವಿಸ್ತರಿಸುವುದು ಕಾನೂನಿನಡಿ ರಕ್ಷಿಸಲ್ಪಟ್ಟ ಚಟುವಟಿಕೆಯಲ್ಲ ಎಂದು ಸ್ಪಷ್ಟಪಡಿಸಿದೆ.








