ವಾಷಿಂಗ್ಟನ್: ಅಮೆರಿಕದ ನೆರೆಯ ದ್ವೀಪ ರಾಷ್ಟ್ರ ಕ್ಯೂಬಾ (Cuba) ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಇತ್ತೀಚಿನ ಹೇಳಿಕೆ ಇಡೀ ವಿಶ್ವದ ಗಮನ ಸೆಳೆದಿದೆ. ಅಮೆರಿಕದ ಮಿಲಿಟರಿ ಶಕ್ತಿ ಎಷ್ಟಿದೆ ಎಂದರೆ ನಾವು ಕ್ಯೂಬಾವನ್ನು ‘ತಕ್ಷಣವೇ’ ವಶಪಡಿಸಿಕೊಳ್ಳಲು ಸಾಧ್ಯವಿದೆ ಎಂದು ಟ್ರಂಪ್ ಗುಡುಗಿದ್ದಾರೆ.
ಕ್ಯೂಬಾದಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಅಲ್ಲಿನ ಸರ್ಕಾರದ ಧೋರಣೆಗಳ ಬಗ್ಗೆ ಮಾತನಾಡುವಾಗ ಟ್ರಂಪ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ನಮಗೆ ಮನಸ್ಸಿದ್ದರೆ ಕ್ಯೂಬಾವನ್ನು ನಾವು ಬಹುಬೇಗನೆ ಅಂದರೆ ‘ತಕ್ಷಣವೇ’ ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಬಹುದು” ಎಂದು ಹೇಳುವ ಮೂಲಕ ಕ್ಯೂಬಾ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಕ್ಯೂಬಾದಿಂದ ಅಮೆರಿಕಕ್ಕೆ ಆಗುತ್ತಿರುವ ಮಾದಕ ದ್ರವ್ಯ ಸಾಗಣೆ ಮತ್ತು ರಷ್ಯಾದೊಂದಿಗೆ ಕ್ಯೂಬಾ ಹೊಂದಿರುವ ನಿಕಟ ಸಂಬಂಧ ಟ್ರಂಪ್ ಅವರ ಈ ಕೋಪಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ.
ಈ ಹೇಳಿಕೆಯು ಅಂತರಾಷ್ಟ್ರೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದ್ದು, ಇದು ಕ್ಯೂಬಾ ಮೇಲಿನ ಆಕ್ರಮಣದ ಮುನ್ಸೂಚನೆಯೇ ಎಂಬ ಆತಂಕ ಶುರುವಾಗಿದೆ.








