ನವದೆಹಲಿ: ದೇಶದ ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು 2026ರ ಏಪ್ರಿಲ್ ತಿಂಗಳಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹದಲ್ಲಿ ಶೇ. 8.7ರಷ್ಟು ಭರ್ಜರಿ ಏರಿಕೆ ಕಂಡುಬಂದಿದ್ದು, ಒಟ್ಟು 2,42,702 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ (ಮೇ 1) ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಏಪ್ರಿಲ್ 2026ರಲ್ಲಿ ₹2,42,702 ಕೋಟಿ (ಕಳೆದ ವರ್ಷ ಏಪ್ರಿಲ್‌ನಲ್ಲಿ ₹2,23,265 ಕೋಟಿ ಇತ್ತು). ಮರುಪಾವತಿಗಳನ್ನು (Refunds) ಹೊರತುಪಡಿಸಿ, ನಿವ್ವಳ ಜಿಎಸ್‌ಟಿ ಆದಾಯವು ₹2,10,909 ಕೋಟಿಗಳಷ್ಟಿದೆ. ಇದು ಕಳೆದ ವರ್ಷಕ್ಕಿಂತ ಶೇ. 7.3ರಷ್ಟು ಹೆಚ್ಚಳವಾಗಿದೆ. ಮಾರ್ಚ್ 2026ರಲ್ಲಿ ₹2,00,064 ಕೋಟಿ ಸಂಗ್ರಹವಾಗಿತ್ತು. ಅದಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಗಣನೀಯ ಏರಿಕೆ ಕಂಡಿದೆ.
ಆರ್ಥಿಕ ಸದೃಢತೆಯ ಸಂಕೇತ:
ಹೊಸ ಹಣಕಾಸು ವರ್ಷದ ಆರಂಭದಲ್ಲೇ ಈ ಮಟ್ಟದ ತೆರಿಗೆ ಸಂಗ್ರಹವಾಗಿರುವುದು ಭಾರತದ ಆರ್ಥಿಕತೆಯ ಬಲವಾದ ಬೆಳವಣಿಗೆಯನ್ನು ಸೂಚಿಸುತ್ತದೆ. ಹಬ್ಬದ ಸೀಸನ್ ಮತ್ತು ಹೆಚ್ಚಿದ ಗ್ರಾಹಕ ಬಳಕೆಯು ಈ ದಾಖಲೆ ಮಟ್ಟದ ಸಂಗ್ರಹಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.








