ವಾಷಿಂಗ್ಟನ್: “ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ” ಎಂದು ನಾವು ಕೇಳುತ್ತಲೇ ಇರುತ್ತೇವೆ. ಆದರೆ, ಅಮೆರಿಕದ ಪ್ರಸಿದ್ಧ ಹೃದಯ ಶಸ್ತ್ರಚಿಕಿತ್ಸಕ (Cardiac Surgeon) ಡಾ. ಜೆರೆಮಿ ಲಂಡನ್ ಅವರು ಸತತ 1,500 ದಿನಗಳ ಕಾಲ (ಸುಮಾರು 4 ವರ್ಷ) ಮದ್ಯದಿಂದ ದೂರವಿದ್ದು, ತಮ್ಮ ಜೀವನದಲ್ಲಿ ಆದ ಅದ್ಭುತ ಬದಲಾವಣೆಗಳನ್ನು ಹಂಚಿಕೊಂಡಿದ್ದಾರೆ. ಒಬ್ಬ ವೈದ್ಯರಾಗಿ ಅವರು ಕಂಡುಕೊಂಡ ಈ 4 ಸತ್ಯಗಳು ಈಗ ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ.
ಸುಮಾರು 25 ವರ್ಷಗಳ ಅನುಭವ ಹೊಂದಿರುವ ಡಾ. ಜೆರೆಮಿ, ಮದ್ಯಪಾನ ತ್ಯಜಿಸಿದ ನಂತರ ತಮ್ಮ ದೇಹ ಮತ್ತು ಮನಸ್ಸಿನ ಮೇಲೆ ಆದ ಪ್ರಭಾವಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ:
ಮಾನಸಿಕ ಸ್ಪಷ್ಟತೆ ಮತ್ತು ಚುರುಕುತನ: ಮದ್ಯಪಾನ ಬಿಟ್ಟ ನಂತರ ಮೆದುಳಿನ ಮೇಲಿದ್ದ ‘ಮಂಜು’ (Brain Fog) ಕವಿದಂತಿದ್ದ ಸ್ಥಿತಿ ದೂರವಾಯಿತು. ಬೆಳಿಗ್ಗೆ ಎದ್ದ ಕೂಡಲೇ ಆಲಸ್ಯವಿಲ್ಲದೆ ಅತ್ಯಂತ ಚುರುಕಾಗಿ ಕೆಲಸದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಪ್ರತಿ ದಿನವೂ ನಾನು ಪೂರ್ಣ ಪ್ರಮಾಣದ ಏಕಾಗ್ರತೆಯಿಂದ ಇರಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.
ಭಾವನಾತ್ಮಕ ಸ್ಥಿರತೆ: ಮದ್ಯಪಾನವು ನಮ್ಮ ಭಾವನೆಗಳನ್ನು ಮರೆಮಾಚುತ್ತದೆ. ಆದರೆ ಅದನ್ನು ಬಿಟ್ಟ ನಂತರ, ಜೀವನದ ಏರಿಳಿತಗಳನ್ನು ಸಮಾಧಾನದಿಂದ ಸ್ವೀಕರಿಸುವ ಶಕ್ತಿ ಬಂತು. ಇದರಿಂದ ಸಂವಹನ ಉತ್ತಮಗೊಂಡು, ಸಂಬಂಧಗಳು ಮೊದಲಿಗಿಂತ ಹೆಚ್ಚು ಅರ್ಥಪೂರ್ಣವಾದವು.
ನಂಬಿಕೆ ಮತ್ತು ಶಿಸ್ತು: ಪ್ರತಿದಿನ ಮದ್ಯದಿಂದ ದೂರವಿರುವ ನಿರ್ಧಾರವು ನನ್ನಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿತು. ನನ್ನ ಜೀವನಶೈಲಿಯಲ್ಲಿ ಒಂದು ರೀತಿಯ ಶಿಸ್ತು (Consistency) ಬಂತು. ಈ ಶಿಸ್ತು ನನ್ನನ್ನು ನಾನು ಹೆಚ್ಚು ನಂಬುವಂತೆ ಮಾಡಿತು.
ನಿಜವಾದ ಜೀವನದ ಅನುಭವ: ಜೀವನದ ನೋವು ಮತ್ತು ನಲಿವುಗಳನ್ನು ಅನುಭವಿಸುವುದು ಮಾನವ ಸಹಜ ಗುಣ. ಮದ್ಯಪಾನವು ಈ ಸಂವೇದನೆಗಳನ್ನು ಮಂದಗೊಳಿಸುತ್ತದೆ (Numbing). ಆದರೆ ಈಗ ನಾನು ಜೀವನದ ಪ್ರತಿಯೊಂದು ಕ್ಷಣವನ್ನು ಅದರ ನೈಜ ರೂಪದಲ್ಲೇ ಅನುಭವಿಸುತ್ತಿದ್ದೇನೆ ಎಂದು ಅವರು ಹಂಚಿಕೊಂಡಿದ್ದಾರೆ.








