ಕಾರವಾರ: ಆತ ಕೇವಲ ವೈದ್ಯನಾಗಿರಲಿಲ್ಲ, ಆ ಕುಗ್ರಾಮದ ಪಾಲಿನ ಆಪದ್ಬಾಂಧವ. ವ್ಯವಸ್ಥೆಗಳೇ ಮರೆತುಹೋದ ದಟ್ಟ ಅರಣ್ಯದ ನಡುವಿನ ಹಳ್ಳಿಗೆ ಆತನೇ ಸಂಜೀವಿನಿಯಾಗಿದ್ದ. ಆದರೆ, ಸಾವಿರಾರು ಜನರ ಎದೆಯ ದವಡಿತ ಅಳೆದ ಆ ಜೀವ, ತನ್ನ ಎದೆಯಲ್ಲಿ ಏಳುವ ನೋವನ್ನು ಯಾರಿಗೂ ತಿಳಿಸಲಾಗದೆ, ನೆಟ್‌ವರ್ಕ್ ಇಲ್ಲದ ಊರಿನಲ್ಲಿ ಸಹಾಯಕ್ಕಾಗಿ ಹಲುಬುತ್ತಾ ಕೊನೆಯುಸಿರೆಳೆದಿದೆ.
ಇದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಡಿಗ್ಗಿ ಗ್ರಾಮದ ಜನಮನ ಗೆದ್ದಿದ್ದ ಡಾ. ಲೆನ್ವರ್ ಲೋಬೋ ಅವರ ಹೃದಯವಿದ್ರಾವಕ ಕಥೆ.
ಶಾಪವಾದ ಕೂಗ್ರಾಮದ ಒಂಟಿತನ
ಉತ್ತರ ಕನ್ನಡ ಮತ್ತು ಗೋವಾ ಗಡಿಭಾಗದ ಡಿಗ್ಗಿ ಎನ್ನುವುದು ಹೊರಜಗತ್ತಿನಿಂದ ಸಂಪೂರ್ಣ ಕಡಿದುಹೋದ ಪ್ರದೇಶ. ಅಲ್ಲಿ ಸರಿಯಾದ ರಸ್ತೆಯಿಲ್ಲ, ಮೊಬೈಲ್ ನೆಟ್‌ವರ್ಕ್ ಅಂತೂ ಕನಸಿನ ಮಾತು. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೂ ಡಾ. ಲೆನ್ವರ್ ಲೋಬೋ ಕಳೆದ ಮೂರು ವರ್ಷಗಳಿಂದ ಸ್ಕೋಡಾ ವೇಸ್ ಸಂಸ್ಥೆಯ ಮೂಲಕ ಜನರ ಸೇವೆ ಮಾಡುತ್ತಿದ್ದರು. ಅದೆಷ್ಟೋ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಪ್ರಾಣ ಉಳಿಸಿದ್ದ ಲೋಬೋ ಅವರು, ಡಿಗ್ಗಿ ಗ್ರಾಮಸ್ಥರಿಗೆ ಪಾಲಿನ ದೇವರಾಗಿದ್ದರು.
ಆ ರಾತ್ರಿ ನಡೆದಿದ್ದೇನು?
ವೈದ್ಯರ ಸಾವಿನ ಘಟನೆ ವ್ಯವಸ್ಥೆಯ ಮುಖಕ್ಕೆ ಹಿಡಿದ ಕೈಗನ್ನಡಿಯಂತಿದೆ. ರಾತ್ರಿ ವೇಳೆ ಡಾ. ಲೋಬೋ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ದಟ್ಟ ಕಾಡು, ಗಾಢ ಅಂಧಕಾರದ ನಡುವೆ ಸಹಾಯಕ್ಕಾಗಿ ಯಾರನ್ನು ಕರೆಯಲು ಸಾಧ್ಯವಿರಲಿಲ್ಲ. ಕೈಯಲ್ಲಿದ್ದ ಮೊಬೈಲ್‌ನಲ್ಲಿ ‘ಸಿಗ್ನಲ್’ ಇರಲಿಲ್ಲ, ಊರ ಹೊರಕ್ಕೆ ಕರೆದೊಯ್ಯಲು ವಾಹನವೂ ಇರಲಿಲ್ಲ. ನೋವಿನಿಂದ ನರಳುತ್ತಲೇ ರಾತ್ರಿ ಕಳೆದ ಅವರು, ಬೆಳಗಿನ ಜಾವ ವಾಹನವೊಂದನ್ನು ವ್ಯವಸ್ಥೆ ಮಾಡಿಕೊಂಡು ಜೋಯಿಡಾ ಕಡೆಗೆ ಹೊರಟರು.
ಆದರೆ ಕಾಲ ಮಿಂಚಿಹೋಗಿತ್ತು. ದಾರಿ ಮಧ್ಯದಲ್ಲಿ ಎದೆನೋವು ಉಲ್ಬಣಿಸಿ, ಚಿಕಿತ್ಸೆ ಸಿಗುವ ಮೊದಲೇ ಆ ಮಹಾನ್ ಚೇತನ ಇಹಲೋಕ ತ್ಯಜಿಸಿತು.
ಇಡೀ ಗ್ರಾಮವೇ ಕಂಬನಿ
“ಸಾವಿರಾರು ಜನರ ಜೀವ ಉಳಿಸಿದ ಡಾಕ್ಟರ್‌ಗೆ ಇಂತಹ ಸ್ಥಿತಿ ಬರಬಾರದಿತ್ತು” ಎಂದು ಗ್ರಾಮಸ್ಥರು ಕಣ್ಣೀರಿಡುತ್ತಿದ್ದಾರೆ. ಸದಾ ನಗುಮುಖದಿಂದ ಚಿಕಿತ್ಸೆ ನೀಡುತ್ತಿದ್ದ ವೈದ್ಯರ ಸಾವು ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ತನಗಾಗಿ ಜೀವ ಸವೆಸಿದ ವೈದ್ಯನಿಗೆ ಕನಿಷ್ಠ ತುರ್ತು ಚಿಕಿತ್ಸೆ ಕೊಡಿಸಲಾಗದ ಅಸಹಾಯಕತೆ ಗ್ರಾಮಸ್ಥರನ್ನು ಕಾಡುತ್ತಿದೆ.
ನನ್ನ ಮಾತು: “ಡಾ. ಲೆನ್ವರ್ ಲೋಬೋ ಅವರ ಸಾವು ವೈಯಕ್ತಿಕ ನಷ್ಟವಲ್ಲ, ಅದು ಇಡೀ ಸಮಾಜಕ್ಕೆ ಆದ ನಷ್ಟ. ಆಧುನಿಕ ಯುಗದಲ್ಲೂ ನೆಟ್‌ವರ್ಕ್ ಮತ್ತು ರಸ್ತೆಯಿಲ್ಲದೆ ಒಬ್ಬ ವೈದ್ಯ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಾರೆ ಎಂದರೆ ಅದು ನಾವು ತಲೆತಗ್ಗಿಸುವ ವಿಷಯ.”
ನೂರಾರು ಜೀವಗಳನ್ನು ಉಳಿಸಿದ ಆ ‘ಸಂಜೀವಿನಿ’ಯ ಆತ್ಮಕ್ಕೆ ಶಾಂತಿ ಸಿಗಲಿ.
ಶೃಂಗೇರಿ ಮರು ಎಣಿಕೆ: ಲೆಕ್ಕಾಚಾರ ಉಲ್ಟಾ, ಜೀವರಾಜ್‌ಗೆ ಗೆಲುವಿನ ವಿಶ್ವಾಸ; ಟ್ಯಾಂಪರಿಂಗ್ ಆರೋಪ ಮಾಡಿದ ರಾಜೇಗೌಡ
ರಾಜ್ಯ ಸರ್ಕಾರಿ ನೌಕರರೇ ಗಮನಿಸಿ : `ಹಾಜರಾತಿ’ ಬಗ್ಗೆ ಇಲ್ಲಿದೆ ಬಿಗ್ ಅಪ್ ಡೇಟ್.!








