ತುಮಕೂರು: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ್ದ ನವಿಲುಗಳ ನಿಗೂಢ ಸರಣಿ ಸಾವಿನ ರಹಸ್ಯ ಕೊನೆಗೂ ಬಯಲಾಗಿದೆ. ರಾಷ್ಟ್ರಪಕ್ಷಿಗಳ ಸಾವಿಗೆ ಮಾರಕ ಹೆಚ್ 5 ಎನ್ 1 (H5N1) ಸೋಂಕು ಅಂದರೆ ‘ಬರ್ಡ್ ಫ್ಲೂ’ ಕಾರಣ ಎಂಬುದು ವಿಧಿವಿಜ್ಞಾನ ಪ್ರಯೋಗಾಲಯದ (FSL) ವರದಿಯಿಂದ ದೃಢಪಟ್ಟಿದೆ.
ಮೃತಪಟ್ಟ ನವಿಲುಗಳ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ, ಅವುಗಳಲ್ಲಿ ಹೆಚ್ 5 ಎನ್ 1 ವೈರಾಣು ಇರುವುದು ಪತ್ತೆಯಾಗಿದೆ. ಸರಣಿ ಸಾವುಗಳು ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮತ್ತು ಪಶುಸಂಗೋಪನಾ ಇಲಾಖೆ ಜಂಟಿಯಾಗಿ ತನಿಖೆ ಕೈಗೊಂಡಿದ್ದವು. ವರದಿ ದೃಢಪಡುತ್ತಿದ್ದಂತೆ ಜಿಲ್ಲಾಡಳಿತವು ಹೈ ಅಲರ್ಟ್ ಘೋಷಿಸಿದ್ದು, ಸೋಂಕು ಹರಡದಂತೆ ತಡೆಯಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಾರ್ವಜನಿಕರಲ್ಲಿ ಮನವಿ:
ಸೋಂಕು ಪತ್ತೆಯಾಗಿರುವ ಪ್ರದೇಶದ ಸುತ್ತಮುತ್ತಲಿನ ಜನರು ಜಾಗರೂಕರಾಗಿರಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ವಿಶೇಷವಾಗಿ ಕೋಳಿ ಫಾರಂ ಮಾಲೀಕರು ಮತ್ತು ಪಕ್ಷಿ ಸಾಕಾಣಿಕೆದಾರರು ತಮ್ಮ ಹಕ್ಕಿಗಳ ಮೇಲೆ ನಿಗಾ ಇಡುವಂತೆ ಹಾಗೂ ಯಾವುದೇ ಅಸಹಜ ಸಾವು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ತಿಳಿಸಲಾಗಿದೆ.








