ಬೆಂಗಳೂರು : ಸಿಲಿಕಾನ್ ಸಿಟಿಯನ್ನು ಬೆಚ್ಚಿಬೀಳಿಸಿದ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿತದ ಭೀಕರ ದುರಂತವನ್ನು ಲೋಕಾಯುಕ್ತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಏಳು ಮಂದಿಯ ಬಲಿತೆಗೆದುಕೊಂಡ ಈ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.
ಇಂದು ಮಧ್ಯಾಹ್ನ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಮತ್ತು ಉಪಲೋಕಾಯುಕ್ತರು ದುರಂತ ಸಂಭವಿಸಿದ ಬೌರಿಂಗ್ ಆಸ್ಪತ್ರೆಯ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳ ವೀಕ್ಷಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಲೋಕಾಯುಕ್ತರು, ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ದುರಂತಕ್ಕೆ ಸಂಬಂಧಿಸಿದಂತೆ ಕೇವಲ ಕೆಳಹಂತದ ಸಿಬ್ಬಂದಿಯನ್ನಲ್ಲ, ಬದಲಿಗೆ ಆಡಳಿತ ಯಂತ್ರದ ಉನ್ನತ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲು ಲೋಕಾಯುಕ್ತ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಲೋಕಾಯುಕ್ತರು ಅತ್ಯಂತ ಮಹತ್ವದ ಘೋಷಣೆ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಬಿಎ ಮುಖ್ಯ ಆಯುಕ್ತ ಎಂ ಮಹೇಶ್ವರ ರಾವ್, ನಗರದ ಐದೂ ಪಾಲಿಕೆಗಳ ಆಯುಕ್ತರು, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಜಲಮಂಡಳಿ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಆರೋಪಿಗಳನ್ನಾಗಿ ಮಾಡಲಾಗಿದೆ.
ಒಂದೇ ಮಳೆಗೆ ಇಷ್ಟೆಲ್ಲಾ ಅವಾಂತರಗಳಾಗುತ್ತಿದ್ದರೂ ಜಿಬಿಎ ಮತ್ತು ಜಲಮಂಡಳಿ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಮರದ ರೆಂಬೆಗಳನ್ನು ತೆರವುಗೊಳಿಸುವಂತಹ ಪ್ರಾಥಮಿಕ ಕೆಲಸಗಳು ಏಕಾಗಿಲ್ಲ? ಗೋಡೆಗಳು ಶಿಥಿಲವಾಗಿದ್ದರೂ ವ್ಯಾಪಾರಕ್ಕೆ ಅನುಮತಿ ನೀಡಿದ್ದು ಯಾಕೆ? ವಿದ್ಯುತ್ ಹೊಡೆದು ಸಾವು ಸಂಭವಿಸಿದ ಪ್ರಕರಣಗಳಲ್ಲೂ ಯಾರೂ ಜವಾಬ್ದಾರಿ ತೆಗೆದುಕೊಂಡಿಲ್ಲವೇಕೆ? ವೈದ್ಯಕೀಯ ಶಿಕ್ಷಣ ಇಲಾಖೆಯು ಈ ತಡೆಗೋಡೆಯ ಬಗ್ಗೆ ಯಾವುದೇ ಗಮನಹರಿಸಿರಲಿಲ್ಲವೇ ಎಂದು ಪ್ರಶ್ನೆ ಕೇಳಿದ್ದಾರೆ.








