ಪ್ರೀತಿಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಹಿಮಾಚಲ ಪ್ರದೇಶದ ಕುಳ್ಳು ಜಿಲ್ಲೆಯ ಈ ಜೋಡಿ ಸಾಬೀತುಪಡಿಸಿದೆ. ಮೊಮ್ಮಗಳ ವಯಸ್ಸಿನ ಹುಡುಗಿಯನ್ನು ಮದುವೆಯಾಗುವ ಮೂಲಕ 66 ವರ್ಷದ ವೃದ್ಧರೊಬ್ಬರು ಈಗ ಇಡೀ ರಾಜ್ಯದಾದ್ಯಂತ ಸುದ್ದಿಯಾಗಿದ್ದಾರೆ.
ಕುಳ್ಳು ಜಿಲ್ಲೆಯ ಬಂಜಾರ್ ಉಪವಿಭಾಗದ ಥರಿಂಬಲಾ ಗ್ರಾಮದ ನಿವಾಸಿ ಸೋಮ್ ದೇವ್ (66) ಅವರು 35 ವರ್ಷದ ಹುಡುಗಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಧು ಮತ್ತು ವರನ ನಡುವೆ ಬರೋಬ್ಬರಿ 31 ವರ್ಷಗಳ ವಯಸ್ಸಿನ ವ್ಯತ್ಯಾಸವಿರುವುದು ಈ ಮದುವೆಯ ವಿಶೇಷ.
ಸೋಮ್ ದೇವ್ ಅವರು ಸಾಂಪ್ರದಾಯಿಕ ಪದ್ಧತಿಯಂತೆ ಮದುವೆಯಾಗಿದ್ದು, ಮದುವೆಯ ವಿಧಿವಿಧಾನಗಳ ಸಮಯದಲ್ಲಿ ಈ ಜೋಡಿ ಅತ್ಯಂತ ಸಂತೋಷದಿಂದ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ, ತಮ್ಮ ಮದುವೆಯ ಸಂಭ್ರಮದಲ್ಲಿ ದಂಪತಿಗಳು ಹಾಡಿ-ಕುಣಿದು ಸಂಭ್ರಮಿಸಿದ್ದಾರೆ. ಇವರ ಮದುವೆಯ ವಿಡಿಯೋಗಳು ಮತ್ತು ಫೋಟೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.
ಸಾಮಾಜಿಕ ಜಾಲತಾಣದಲ್ಲಿ ಚರ್ಚೆ:
ಈ ವಿವಾಹದ ಬಗ್ಗೆ ಅಂತರ್ಜಾಲದಲ್ಲಿ ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಕೆಲವರು ಇಷ್ಟು ದೊಡ್ಡ ವಯಸ್ಸಿನ ವ್ಯತ್ಯಾಸದ ಮದುವೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿ, ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇನ್ನು ಅನೇಕರು ಇದು ಅವರ ವೈಯಕ್ತಿಕ ನಿರ್ಧಾರ ಮತ್ತು ಪರಸ್ಪರ ಒಪ್ಪಿಗೆಯಿಂದ ನಡೆದ ಮದುವೆಯಾದ್ದರಿಂದ, ಅವರ ನಿರ್ಧಾರವನ್ನು ಗೌರವಿಸಬೇಕು ಎಂದು ಶುಭ ಹಾರೈಸುತ್ತಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್‌ನ ಮಾಜಿ ಪ್ರಧಾನ ಹೇಮ್ ರಾಜ್ ಈ ಬಗ್ಗೆ ಮಾತನಾಡಿ, “ಸೋಮ್ ದೇವ್ ಅವರ ಮದುವೆಗೆ ಗ್ರಾಮಸ್ಥರು ಕೂಡ ಕೈಜೋಡಿಸಿ ಸಹಾಯ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ, ಬದಲಾಗುತ್ತಿರುವ ಸಮಾಜದಲ್ಲಿ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಪ್ರೀತಿ ಎನ್ನುವುದು ಸಾಮಾಜಿಕ ಕಟ್ಟುಪಾಡುಗಳಿಗಿಂತ ಮಿಗಿಲು ಎಂಬುದು ಈ ಘಟನೆಯ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ಮೈಸೂರು : ಕೆಲಸ ಮುಗಿಸಿ ಮನೆಗೆ ತಡವಾಗಿ ಬಂದಿದ್ದಕ್ಕೆ ಅನುಮಾನಗೊಂಡು ಪತ್ನಿಯ ಭೀಕರ ಕೊಲೆ








