ವಾಷಿಂಗ್ಟನ್: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಅತ್ಯಂತ ಕಠಿಣ ಮತ್ತು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. “ಇರಾನ್ ಈಗ ಸತ್ತು ಬಿದ್ದ ಹಂದಿಯಂತೆ ಉಸಿರುಗಟ್ಟುತ್ತಿದೆ (Choking like a stuffed pig)” ಎಂದು ಲೇವಡಿ ಮಾಡಿರುವ ಟ್ರಂಪ್, ಹೊಸ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವವರೆಗೆ ಇರಾನ್ ಮೇಲಿನ ನೌಕಾಪಡೆ ದಿಗ್ಬಂಧನವನ್ನು ತೆರವುಗೊಳಿಸಲು ಸಾಧ್ಯವೇ ಇಲ್ಲ ಎಂದು ಗುಡುಗಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು (Strait of Hormuz) ಭಾಗಶಃ ತೆರೆಯುವ ಮತ್ತು ಯುದ್ಧ ಕೊನೆಗೊಳಿಸುವ ಇರಾನ್ನ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ತೈಲ ರಫ್ತು ಸ್ಥಗಿತಗೊಂಡಿರುವುದರಿಂದ ಇರಾನ್ನ ಆರ್ಥಿಕತೆ ಸಂಪೂರ್ಣ ಕುಸಿಯುವ ಹಂತದಲ್ಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಟ್ರಂಪ್, “ನಮ್ಮ ನೌಕಾಪಡೆ ದಿಗ್ಬಂಧನವು ಬಾಂಬ್ ದಾಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ. ಇರಾನ್ನ ಮೂಲಭೂತ ಸೌಕರ್ಯಗಳು ಈಗ ಸ್ಫೋಟದ ಹಂತದಲ್ಲಿವೆ. ಅವರು ಈಗ ಅಸಹಾಯಕರಾಗಿದ್ದಾರೆ” ಎಂದು ತಮ್ಮ ತಂತ್ರಗಾರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರವನ್ನು ಹೊಂದಲು ಬಿಡುವುದಿಲ್ಲ. ನಾವು ಕೇಳಿದ ನಿಯಮಗಳಿಗೆ ಒಪ್ಪಿ ಹೊಸ ಒಪ್ಪಂದಕ್ಕೆ ಸಹಿ ಹಾಕದ ಹೊರತು ಹಾರ್ಮುಜ್ ಜಲಸಂಧಿಯ ಮೂಲಕ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಟ್ರಂಪ್ ಎಚ್ಚರಿಸಿದ್ದಾರೆ.








