ಬೆಂಗಳೂರು : ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಬೆಂಬಲಿಗರ ನಡುವೆ ತೆರೆ ಮರೆಯಲ್ಲಿ ಭಾರಿ ಸರ್ಕಸ್ ನಡೆದಿದ್ದು, ಇದರ ಮಧ್ಯ ಸಿಎಂ ಸಿದ್ದರಾಮಯ್ಯ ಅಧಿಕಾರ ಮುಂದುವರಿಸಲು ಮತ್ತು ಪದತ್ಯಾಗ ಎರಡಕ್ಕೂ ಸಿದ್ಧರಾಗಿದ್ದಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಗೊಂದಲ ಬಗೆಹರಿಸಬೇಕು. ಗೊಂದಲ ಬಗೆಹರಿಸಿದಷ್ಟು ರಾಜ್ಯಕ್ಕೆ ಒಳ್ಳೆಯದು. ಗೊಂದಲ ಮುಂದುವರಿಯಲು ಹೈಕಮಾಂಡ್ ಅವಕಾಶ ನೀಡಬಾರದು. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಇದು ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರ ಅಲ್ಲ. ಸಿದ್ದರಾಮಯ್ಯ ಅವರು ಅಧಿಕಾರ ಮುಂದುವರಿಕೆಗೂ ಸಿದ್ದರಾಗಿದ್ದಾರೆ, ಪದತ್ಯಾಗಕ್ಕೂ ಸಿದ್ದರಾಗಿದ್ದಾರೆ ಎಂದರು.
ಅಧಿಕಾರ ಶಾಶ್ವತವಲ್ಲ. ಅಧಿಕಾರ ಕಳೆದುಕೊಂಡವರು ಗಳಿಸ್ತಾರೆ. ರಾಹುಲ್ ನಿರ್ದೇಶನದಂತೆ ಹೋಗಬೇಕು ಎಂಬುದು ಸಿಎಂ ಮನಸ್ಥಿತಿ. ಸಿದ್ದರಾಮಯ್ಯ ಮುಂದುವರಿಯಬೇಕು ಎಂಬ ಬಗ್ಗೆ ನಾವೆಲ್ಲ ನಮ್ಮ ಅಭಿಪ್ರಾಯವನ್ನು ಹೈಕಮಾಂಡ್ಗೆ ಹೇಳಿದ್ದೇವೆ. ದಲಿತ ಸಿಎಂ ಆಗಬೇಕು ಎಂಬುದಕ್ಕೆ ನಾನು ಈಗಲೂ ಬದ್ಧ. ಅಹಿಂದ ವರ್ಗ ನಿಜವಾಗಿ ಸಮಾಧಾನವಾಗಿಲ್ಲ. 2013-18 ರ ಸಿದ್ದರಾಮಯ್ಯಗೂ ಈಗಿನ 2023-28 ಸಿದ್ದರಾಮಯ್ಯಗೂ ಬಹಳ ವ್ಯತ್ಯಾಸ ಇದೆ. ಮುಂದಿನ ಚುನಾವಣೆ ಎರಡು ವರ್ಷ ಇದೆ ಎಂದು ಪ್ರತಿಕ್ರಿಯೆ ನೀಡಿದರು.
ಇದರಲ್ಲಿ ಪಕ್ಷದ ಭವಿಷ್ಯ ಅಡಗಿರುತ್ತದೆ. ಹೀಗಾಗಿ ಹೈಕಮಾಂಡ್ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವ ವಿಶ್ವಾಸವಿದೆ. ಸಿಎಂ ಜೊತೆಗೆ ಸಭೆ ಮಾಡಿದಾಗಲೂ ಅವರು ಓಪನ್ ಮೈಂಡ್ನಲ್ಲಿ ಇದ್ದಾರೆ. ರಾಹುಲ್ ಗಾಂಧಿ ಸೂಚನೆ ಪಾಲನೆ ಮಾಡುತ್ತೇನೆ. ಆಗ ನಿಮ್ಮೆಲ್ಲರ ಸಹಕಾರ ಇರಬೇಕು ಎಂದು ಸಿಎಂ ಅಭಿಮತ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ತೆಗೆದುಕೊಳ್ಳುವ ತೀರ್ಮಾನದಂತೆ ನಡೆಯೋಣ ಎಂದಿದ್ದಾರೆ ಎಂದು ತಿಳಿಸಿದರು.








