ಭಾರತದಲ್ಲಿ ಸದ್ಯ ಉಂಟಾಗಿರುವ ತಾಪಮಾನ ಏರಿಕೆ ಕೇವಲ ಆರಂಭವಷ್ಟೇ, ಅಸಲಿ ಸವಾಲು ಮುಂದಿದೆ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಇತ್ತೀಚಿನ ವರದಿಯೊಂದು ಎಚ್ಚರಿಸಿದೆ. ಬಿಸಿಲ ಗಾಳಿ ಅಥವಾ ‘ಹೀಟ್ ವೇವ್’ ಕೇವಲ ಆರೋಗ್ಯದ ಸಮಸ್ಯೆಯಾಗಿ ಉಳಿಯದೆ, ದೇಶದ 38 ಕೋಟಿ ಕಾರ್ಮಿಕರ ಜೀವನೋಪಾಯ ಮತ್ತು ಒಟ್ಟು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವರದಿ ತಿಳಿಸಿದೆ.
ಭಾರತದ ಒಟ್ಟು ಕಾರ್ಯಪಡೆಯಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಅಂದರೆ 38 ಕೋಟಿ ಜನರು ಕೃಷಿ, ನಿರ್ಮಾಣ ಮತ್ತು ಸಾರಿಗೆಯಂತಹ ತೆರೆದ ಪ್ರದೇಶಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಹೆಚ್ಚುತ್ತಿರುವ ತಾಪಮಾನದಿಂದ ಇವರ ಕಾರ್ಯಕ್ಷಮತೆ ಕುಸಿಯಲಿದ್ದು, ನೇರ ಆರೋಗ್ಯ ಅಪಾಯಕ್ಕೆ ಇವರು ತುತ್ತಾಗಲಿದ್ದಾರೆ.
ಬಿಸಿಲನ್ನು ಪ್ರವಾಹ ಅಥವಾ ಚಂಡಮಾರುತದಂತೆ ತಕ್ಷಣಕ್ಕೆ ಗುರುತಿಸಲು ಸಾಧ್ಯವಿಲ್ಲದ ಕಾರಣ ಇದನ್ನು ‘ಅದೃಶ್ಯ ವಿಪತ್ತು’ ಎಂದು ಕರೆಯಲಾಗಿದೆ. ಇದು ನಿಧಾನವಾಗಿ ಜನರ ಉತ್ಪಾದಕತೆಯನ್ನು ಕುಗ್ಗಿಸಿ, ದೇಶದ ಜಿಡಿಪಿ (GDP) ಮೇಲೆ ಶೇ. 4.5 ರಷ್ಟು ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ.
ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ILO) ಅಂದಾಜಿನ ಪ್ರಕಾರ, ಅತಿಯಾದ ಬಿಸಿಲಿನಿಂದಾಗಿ 2030ರ ವೇಳೆಗೆ ಭಾರತವು ಸುಮಾರು 3.5 ಕೋಟಿ ಪೂರ್ಣ ಪ್ರಮಾಣದ ಉದ್ಯೋಗಗಳನ್ನು ಕಳೆದುಕೊಳ್ಳಬಹುದು.
ಹಗಲಿನ ತಾಪಮಾನದ ಜೊತೆಗೆ ರಾತ್ರಿಯ ತಾಪಮಾನವೂ ಗಣನೀಯವಾಗಿ ಏರುತ್ತಿದೆ. ಇದರಿಂದ ಮಾನವ ದೇಹಕ್ಕೆ ಹಗಲಿನ ಆಯಾಸದಿಂದ ಚೇತರಿಸಿಕೊಳ್ಳಲು ಸಮಯ ಸಿಗದೆ, ಮಾನಸಿಕ ಮತ್ತು ದೈಹಿಕ ಆರೋಗ್ಯ ಹದಗೆಡುತ್ತಿದೆ.








