ನವದೆಹಲಿ: ಲಿವ್-ಇನ್ ರಿಲೇಷನ್ಶಿಪ್ನಲ್ಲಿ (ಸಹಜೀವನ) ಇದ್ದು, ನಂತರ ಮನಸ್ತಾಪಗಳಿಂದ ದೂರಾದ ಬಳಿಕ ಸಂಗಾತಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸುವ ಪ್ರವೃತ್ತಿಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. “ಪರಸ್ಪರ ಒಪ್ಪಿಗೆಯಿಂದ ಜೊತೆಗಿದ್ದು, ಸಂಬಂಧ ಮುರಿದುಬಿದ್ದ ತಕ್ಷಣ ಅದನ್ನು ಅತ್ಯಾಚಾರ ಅಥವಾ ವಂಚನೆ ಎಂದು ಕರೆಯುವುದು ಕಾನೂನಿನ ದುರುಪಯೋಗವಾಗುತ್ತದೆ” ಎಂದು ನ್ಯಾಯಾಲಯ ಎಚ್ಚರಿಸಿದೆ.
ವಯಸ್ಕರು ತಮ್ಮ ಸ್ವಂತ ಇಚ್ಛೆಯಿಂದ ಸಹಜೀವನ ನಡೆಸಲು ನಿರ್ಧರಿಸಿದಾಗ, ಅಲ್ಲಿ ಯಾವುದೇ ಬಲವಂತವಿರುವುದಿಲ್ಲ. ಅಂತಹ ಸಂಬಂಧಗಳು ವಿಫಲವಾದಾಗ ದ್ವೇಷ ತೀರಿಸಿಕೊಳ್ಳಲು ಕ್ರಿಮಿನಲ್ ಕಾನೂನನ್ನು ಬಳಸಬಾರದು ಎಂದು ಪೀಠ ಹೇಳಿದೆ.
ಮದುವೆಯ ಸುಳ್ಳು ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಲಾಗಿದೆ ಎಂದು ಬ್ರೇಕಪ್ ನಂತರ ನೀಡುವ ದೂರುಗಳನ್ನು ನ್ಯಾಯಾಲಯವು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಪ್ರತಿ ಬ್ರೇಕಪ್ ಪ್ರಕರಣವೂ ಅತ್ಯಾಚಾರವಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದರು.
ಲಿವ್-ಇನ್ ರಿಲೇಷನ್ಶಿಪ್ಗೆ ಪ್ರವೇಶಿಸುವಾಗ ಅದರಲ್ಲಿರುವ ಸಾಧಕ-ಬಾಧಕಗಳ ಅರಿವು ಇಬ್ಬರಿಗೂ ಇರುತ್ತದೆ. ಸಂಬಂಧ ಹಳಸಿದಾಗ ಒಬ್ಬರನ್ನೇ ಗುರಿ ಮಾಡುವುದು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.








