ನವದೆಹಲಿ: 2008ರ ಮುಂಬೈ ಭಯೋತ್ಪಾದನಾ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವುರ್ ರಾಣಾನನ್ನು ಮುಂದಿನ ವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (AIIMS) ಗೆ ದಾಖಲಿಸಿ ವೈದ್ಯಕೀಯ ಪ್ರಕ್ರಿಯೆಗೆ ಒಳಪಡಿಸುವ ಸಾಧ್ಯತೆಯಿದೆ. ಕಳೆದ ವರ್ಷ ಅಮೆರಿಕಾದಿಂದ ಹಸ್ತಾಂತರಗೊಂಡ ನಂತರ ರಾಣಾ ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ.
65 ವರ್ಷದ ರಾಣಾ ವಯೋಸಹಜ ಹೃದಯ ಸಂಬಂಧಿ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾನೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ ಐದು ಬಾರಿ ಆತನನ್ನು ತಪಾಸಣೆಗಾಗಿ ಏಮ್ಸ್‌ಗೆ ಕರೆತರಲಾಗಿತ್ತು.
ವಿವಿಧ ಪರೀಕ್ಷೆಗಳ ನಂತರ, ವೈದ್ಯರು ಮೇ 4ರಂದು ಆತನಿಗೆ ಅಗತ್ಯ ವೈದ್ಯಕೀಯ ಪ್ರಕ್ರಿಯೆ (Medical Procedure) ನಡೆಸಲು ದಿನಾಂಕ ನಿಗದಿಪಡಿಸಿದ್ದಾರೆ.
ಹೈ-ರಿಸ್ಕ್ ಕೈದಿಯಾಗಿರುವ ರಾಣಾನನ್ನು ದೆಹಲಿ ಪೊಲೀಸರ ವಿಶೇಷ ತುಕಡಿಯ ಭದ್ರತೆಯಲ್ಲಿ ಆಸ್ಪತ್ರೆಗೆ ಕರೆತರಲಾಗುತ್ತಿದೆ. ಆಸ್ಪತ್ರೆಯಲ್ಲೂ ಆತನಿಗೆ ಬಿಗಿ ಭದ್ರತೆ ಕಲ್ಪಿಸಲಾಗುತ್ತದೆ.
ಪಾಕಿಸ್ತಾನ ಮೂಲದ ಕೆನಡಾ ಪ್ರಜೆಯಾದ ತಹವ್ವುರ್ ರಾಣಾನನ್ನು ಏಪ್ರಿಲ್ 2025 ರಲ್ಲಿ ಅಮೆರಿಕಾದಿಂದ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಮುಂಬೈ ದಾಳಿಯ ಇನ್ನೊಬ್ಬ ಸಂಚುಕೋರ ಡೇವಿಡ್ ಹೆಡ್ಲಿಗೆ ಲಜಿಸ್ಟಿಕ್ ಬೆಂಬಲ ನೀಡಿದ ಆರೋಪ ಈತನ ಮೇಲಿದೆ.








