ಮುಂಬೈ: ಮಹಾರಾಷ್ಟ್ರದ ರಾಜಧಾನಿ ಮುಂಬೈನ ಪೈಧೋನಿ (Pydhonie) ಪ್ರದೇಶದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ರಾತ್ರಿ ಊಟಕ್ಕೆ ಬಿರಿಯಾನಿ ಸೇವಿಸಿದ ನಂತರ ಸಿಹಿಯಾಗಿ ಕಲ್ಲಂಗಡಿ ಹಣ್ಣನ್ನು ತಿಂದ ಒಂದೇ ಕುಟುಂಬದ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ. ಈ ಸಾವುಗಳು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕುಟುಂಬದ ಸದಸ್ಯರು ರಾತ್ರಿ ಬಿರಿಯಾನಿಯನ್ನು ಆರ್ಡರ್ ಮಾಡಿ ಸೇವಿಸಿದ್ದರು. ಊಟ ಮುಗಿದ ನಂತರ ಎಲ್ಲರೂ ಕಲ್ಲಂಗಡಿ ಹಣ್ಣನ್ನು ಹಂಚಿಕೊಂಡು ತಿಂದಿದ್ದಾರೆ. ಆದರೆ, ತಿಂದ ಕೆಲವೇ ಗಂಟೆಗಳಲ್ಲಿ ಕುಟುಂಬದ ಸದಸ್ಯರಿಗೆ ವಾಂತಿ, ತಲೆಸುತ್ತು ಮತ್ತು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ಅಸ್ವಸ್ಥಗೊಂಡ ನಾಲ್ವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಯ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿಯಲಿದೆ.








