ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಕಿವಿಗೊಡದ ಕುಲಪತಿಗಳ ಧೋರಣೆ ಖಂಡಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ನಡೆಸಿದ ಹೋರಾಟ ಹಿಂಸಾರೂಪಕ್ಕೆ ತಿರುಗಿದೆ. ಕಚೇರಿಯ ಮುಂಭಾಗದ ವಸ್ತುಗಳನ್ನು ಪುಡಿ ಮಾಡಿ ಆಕ್ರೋಶ ಹೊರಹಾಕಲಾಗಿದ್ದು, ವಿವಿ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹೌದು ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಸಮಸ್ಯೆಗೆ ಸ್ಪಂದಿಸದ ಕುಲಪತಿಗಳ ವಿರುದ್ಧ ಎನ್‌ಎಸ್‌ಯುಐ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕುಲಪತಿಗಳ ಕಚೇರಿ ಆವರಣದಲ್ಲಿದ್ದ ಕುರ್ಚಿ, ಪಾಟ್ ಎಲ್ಲವನ್ನೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪುಡಿ ಪುಡಿ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸದ ವಿಸಿಗೆ ಧಿಕ್ಕಾರ ಕೂಗಿ, ಕಚೇರಿಯ ಬೋರ್ಡ್‌ಗೆ ಕಪ್ಪು ಮಸಿ ಬಳಿದಿದ್ದಾರೆ. 5 ತಿಂಗಳ ಹಿಂದೆ ನಡೆದ ಪರೀಕ್ಷೆಯ ಫಲಿತಾಂಶ ಇನ್ನೂ ಪ್ರಕಟಿಸಿಲ್ಲ. 1, 3 ಹಾಗೂ 5 ನೇ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿಲ್ಲ. ಕಳೆದ 3 ವರ್ಷಗಳಿಂದ ಯಾವುದೇ ಅಂಕಪಟ್ಟಿ ವಿತರಿಸಿಲ್ಲ. ಪಾಸಿಂಗ್ ಸರ್ಟಿಫಿಕೇಟ್ ಹಾಗೂ ಪದವಿ ಪ್ರಮಾಣ ಪತ್ರ ನೀಡ್ತಿಲ್ಲ. ಡಿಜಿಟಲ್ ಮೌಲ್ಯಮಾಪನವನ್ನು ಕೈಬಿಡಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.








