ರಾಯಚೂರು : ಅಣ್ಣ-ತಮ್ಮಂದಿರ ನಡುವಿನ ಆಸ್ತಿ ವಿವಾದದಲ್ಲಿ ತಮ್ಮನೇ ಅಣ್ಣನ ಮಗನನ್ನು ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದಲ್ಲಿ ಇಂದು ನಡೆದಿದೆ. ಪಿತ್ರಾರ್ಜಿತವಾಗಿ ಹೊಂದಿದ್ದ 4 ಎಕರೆ ಜಮೀನನ್ನು ಹಂಚಿಕೆ ಮಾಡುವ ವಿಚಾರದಲ್ಲಿ ಸಿದ್ದಪ್ಪ ಮತ್ತು ಬಸವರಾಜ್ ಅಣ್ಣತಮ್ಮಂದಿರ ನಡುವೆ ಜಗಳ ನಡೆಯುತ್ತಿತ್ತು.
ಈ ಹಿನ್ನೆಲೆಯಲ್ಲಿ, ಸಿದ್ದಪ್ಪ ಮನೆಯಲ್ಲಿಲ್ಲದ ವೇಳೆ ತಮ್ಮ ಬಸವರಾಜ್ ಮನೆಗೆ ಬಂದು ಅತ್ತಿಗೆ ಅಮೃತಾ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ತಾಯಿಯನ್ನು ರಕ್ಷಿಸಲು ಮುಂದಾದ ಮಗ ನಾಗರಾಜ್ (12) ಮೇಲೆ ಕೂಡ ದಾಳಿ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಹಲ್ಲೆಯಿಂದಾಗಿ ಅಮೃತಾಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯದ ಜೊತೆಗೆ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ನಂತರ ಆರೋಪಿ ಬಸವರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ.








