ವಾಷಿಂಗ್ಟನ್: ತನ್ನ ಮೇಲೆ ಹತ್ಯೆ ಯತ್ನ ನಡೆಸಿದ್ದ ಶೂಟರ್ ಕೋಲ್ ಅಲೆನ್ (Cole Allen) ಬರೆದಿದ್ದಾನೆ ಎನ್ನಲಾದ ಆಘಾತಕಾರಿ ‘ಮ್ಯಾನಿಫೆಸ್ಟೋ’ ಅಥವಾ ಪ್ರಣಾಳಿಕೆಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದಾರೆ. “ನಾನು ಅತ್ಯಾಚಾರಿಯಾಗಲಿ ಅಥವಾ ಪೀಡೋಫೈಲ್ (ಬಾಲಾಪರಾಧಿ ಕಾಮಿ) ಆಗಲಿ ಅಲ್ಲ” ಎಂದು ಹೇಳುವ ಮೂಲಕ ತಮ್ಮ ಮೇಲಿನ ಗಂಭೀರ ಆರೋಪಗಳನ್ನು ಅವರು ಕಟುವಾಗಿ ನಿರಾಕರಿಸಿದ್ದಾರೆ.
ಇತ್ತೀಚೆಗೆ ನಡೆದ ದಾಳಿಯ ನಂತರ ತನಿಖಾ ಸಂಸ್ಥೆಗಳು ಕೋಲ್ ಅಲೆನ್ನ ವಿಚಾರಣೆ ನಡೆಸುವಾಗ ಆತ ಬರೆದಿದ್ದ ಕೆಲವು ಪತ್ರಗಳು ಮತ್ತು ಪ್ರಣಾಳಿಕೆಯನ್ನು ವಶಪಡಿಸಿಕೊಂಡಿದ್ದವು. ಆ ಬರಹಗಳಲ್ಲಿ ಟ್ರಂಪ್ ಅವರನ್ನು “ಲೈಂಗಿಕ ಅಪರಾಧಿ” ಎಂದು ಬಿಂಬಿಸಲಾಗಿತ್ತು ಮತ್ತು ಅದೇ ಕಾರಣಕ್ಕಾಗಿ ತಾನು ಈ ದಾಳಿ ಮಾಡಿದ್ದಾಗಿ ಅಲೆನ್ ಉಲ್ಲೇಖಿಸಿದ್ದ ಎನ್ನಲಾಗಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಈ ಆರೋಪಗಳು ಕೇವಲ ತನ್ನ ವ್ಯಕ್ತಿತ್ವ ಹರಣ ಮಾಡುವ ಪಿತೂರಿಯಾಗಿದೆ ಎಂದು ಕಿಡಿಕಾರಿದ್ದಾರೆ.








