ಬೆಂಗಳೂರು : ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಕರ್ನಾಟಕ ರಾಜ್ಯಪತ್ರದಲ್ಲಿ 18-04-2026ರಂದು ಹೊರಡಿಸಲಾದ ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯ ಸ್ಥಾನಗಳ ಕರಡು ಪ್ರಕಟಣೆಗೆ ಸಾರ್ವಜನಿಕರು ಆಕ್ಷೇಪಣೆಯನ್ನು ಸಲ್ಲಿಸುವ ಅವಧಿಯನ್ನು ಮೇ 2ರ ಸಂಜೆ 5:30ರವರೆಗೆ ವಿಸ್ತರಿಸಲಾಗಿದೆ.
ರಾಜ್ಯದ 31 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸಂಖ್ಯೆಯ ಕುರಿತಂತೆ, ಸ್ವೀಕರಿಸಿದ ಆಕ್ಷೇಪಣೆ/ಅಹವಾಲುಗಳ ಬಗ್ಗೆ ದಿನಾಂಕ:27-04-2026ರ ಏಪ್ರಿಲ್ 27ರಂದು ನಿಗದಿಪಡಿಸಲಾಗಿದ್ದ ಪರಿಶೀಲನಾ ಅದಾಲತ್ ಅನ್ನು ಮುಂದೂಡಲಾಗಿದ್ದು 2026ರ ಮೇ 5 (ಮಂಗಳವಾರ) ಪರಿಶೀಲನಾ ಅದಾಲತ್‌ನ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ ಎಂದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಪ್ರಕಟಣೆ ತಿಳಿಸಿದೆ.
ಅದಾಲತ್‌ನ ಸಮಯ: ಬೆಳಿಗ್ಗೆ 11ರಿಂದ ಮಧ್ಯಾಹ್ನ 1:30 ರವರೆಗೆ ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ವಿಜಯಪುರ, ಹಾವೇರಿ ಮತ್ತು ಉತ್ತರಕನ್ನಡ ಜಿಲ್ಲೆಗಳು. ಮಧ್ಯಾಹ್ನ 2:30 ರಿಂದ ಸಂಜೆ 5ರವರೆಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ, ತುಮಕೂರು, ದಾವಣಗೆರೆ, ಕೋಲಾರ, ಚಿತ್ರದುರ್ಗ, ಶಿವಮೊಗ್ಗ, ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳು. ಅದಾಲತ್ ನಡೆಯುವ ಸ್ಥಳ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್-ನಂ-2 2ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001.








