ಬೊಗೋಟಾ: ದಕ್ಷಿಣ ಕೊಲಂಬಿಯಾದ ಕೌಕಾ (Cauca) ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಬಸ್ ಸ್ಫೋಟದಲ್ಲಿ ಕನಿಷ್ಠ ಏಳು ಜನರು ಮೃತಪಟ್ಟಿದ್ದು, 17ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪನಾಮೆರಿಕನ್ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಸುಧಾರಿತ ಸ್ಫೋಟಕ ಸಾಧನದಿಂದ (IED) ದಾಳಿ ಮಾಡಲಾಗಿದ್ದು, ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಕಾಜಿಬಿಯೊ (Cajibio) ಪುರಸಭೆಯ ವ್ಯಾಪ್ತಿಯಲ್ಲಿ ಬಸ್ ಚಲಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಬಸ್ನ ಮೇಲ್ಛಾವಣಿ ಮತ್ತು ಕಿಟಕಿಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ. ಮೃತಪಟ್ಟವರಲ್ಲಿ ಹೆಚ್ಚಿನವರು ನಾಗರಿಕರಾಗಿದ್ದು, ಗಾಯಗೊಂಡವರಲ್ಲಿ ಐವರು ಮಕ್ಕಳು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಈ ಭೀಕರ ಕೃತ್ಯದ ಹಿಂದೆ ಮಾಜಿ ಫಾರ್ಕ್ (FARC) ಬಂಡುಕೋರರ ಗುಂಪಿನ ಕೈವಾಡವಿದೆ ಎಂದು ಅಲ್ಲಿನ ಸೇನಾ ಮುಖ್ಯಸ್ಥ ಜನರಲ್ ಹ್ಯೂಗೋ ಲೋಪೆಜ್ ಶಂಕೆ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ‘ಇವಾನ್ ಮೊರ್ಡಿಸ್ಕೋ’ ಎಂಬ ಕುಖ್ಯಾತ ನಾಯಕನ ನೇತೃತ್ವದ ಬಂಡುಕೋರ ಗುಂಪು ಈ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಗುಂಪುಗಳು 2016ರ ಶಾಂತಿ ಒಪ್ಪಂದವನ್ನು ವಿರೋಧಿಸಿ ಸಕ್ರಿಯವಾಗಿವೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ, “ಇದು ನಾಗರಿಕರ ಮೇಲೆ ನಡೆದ ಭಯೋತ್ಪಾದನಾ ದಾಳಿ. ಈ ಕೃತ್ಯ ಎಸಗಿದವರು ಫ್ಯಾಸಿಸ್ಟ್ಗಳು ಮತ್ತು ಡ್ರಗ್ ಮಾಫಿಯಾದವರು” ಎಂದು ಕಿಡಿಕಾರಿದ್ದಾರೆ.








