ಇಸ್ಲಾಮಾಬಾದ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳು ಹೊಸ ತಿರುವು ಪಡೆದುಕೊಂಡಿವೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರೂ, ಅಮೆರಿಕದ ಅಧಿಕಾರಿಗಳೊಂದಿಗೆ ತಾವು ಯಾವುದೇ ‘ನೇರ ಮಾತುಕತೆ’ ನಡೆಸುವುದಿಲ್ಲ ಎಂದು ಇರಾನ್ ಸರ್ಕಾರ ಸ್ಪಷ್ಟಪಡಿಸಿದೆ.
ಇರಾನ್ ಮತ್ತು ಅಮೆರಿಕ ನಡುವೆ ನೇರ ಸಂಪರ್ಕದ ಬದಲು ಪಾಕಿಸ್ತಾನವು ‘ಸಂವಹನ ಸೇತುವೆ’ಯಾಗಿ ಕಾರ್ಯನಿರ್ವಹಿಸಲಿದೆ. ಇರಾನ್‌ನ ಪ್ರಸ್ತಾವನೆಗಳನ್ನು ಪಾಕಿಸ್ತಾನದ ಅಧಿಕಾರಿಗಳ ಮೂಲಕ ಅಮೆರಿಕದ ನಿಯೋಗಕ್ಕೆ ತಲುಪಿಸಲಾಗುತ್ತದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘಾಯಿ ತಿಳಿಸಿದ್ದಾರೆ.
ಇತ್ತ ಶ್ವೇತಭವನವು ತನ್ನ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಮತ್ತು ಜೇರೆಡ್ ಕುಶ್ನರ್ ಅವರನ್ನು ಶನಿವಾರದಂದು ಇಸ್ಲಾಮಾಬಾದ್‌ಗೆ ಕಳುಹಿಸಿಕೊಟ್ಟಿದೆ. ಎರಡನೇ ಹಂತದ ಈ ಶಾಂತಿ ಮಾತುಕತೆಗಳಲ್ಲಿ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ‘ಸ್ಟ್ಯಾಂಡ್‌ಬೈ’ನಲ್ಲಿ ಇರಲಿದ್ದಾರೆ ಎಂದು ವರದಿಯಾಗಿದೆ.
ಪಾಕಿಸ್ತಾನದ ನಂತರ ಅರಘ್ಚಿ ಅವರು ಓಮನ್ ಮತ್ತು ರಷ್ಯಾ ದೇಶಗಳಿಗೂ ಭೇಟಿ ನೀಡಲಿದ್ದಾರೆ. “ನಮ್ಮ ನೆರೆಹೊರೆಯ ರಾಷ್ಟ್ರಗಳೇ ನಮಗೆ ಮೊದಲ ಆದ್ಯತೆ” ಎಂದು ಹೇಳುವ ಮೂಲಕ ಪ್ರಾದೇಶಿಕ ಸಹಕಾರಕ್ಕೆ ಇರಾನ್ ಒತ್ತು ನೀಡಿದೆ.








