ಟೆಹ್ರಾನ್: ವಿಶ್ವದ ಪ್ರಮುಖ ತೈಲ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಮೂಲಕ ಸಂಚರಿಸುವ ಹಡಗುಗಳಿಂದ ವಸೂಲಿ ಮಾಡಲಾದ ‘ಟೋಲ್’ ಅಥವಾ ಸುಂಕದ ಹಣವು ನಗದು ರೂಪದಲ್ಲಿ ಇರಾನ್ನ ಖಜಾನೆ ಸೇರಿದೆ ಎಂದು ಇರಾನ್ ಕೇಂದ್ರ ಬ್ಯಾಂಕ್ ಅಧಿಕೃತವಾಗಿ ಖಚಿತಪಡಿಸಿದೆ.
ಅಮೆರಿಕವು ಜಲಸಂಧಿಯ ಮೇಲೆ ನೌಕಾ ದಿಗ್ಬಂಧನ ಹೇರಿರುವ ಬೆನ್ನಲ್ಲೇ, ಇರಾನ್ ಈ ಹಣಕಾಸಿನ ವರದಿಯನ್ನು ಬಿಡುಗಡೆ ಮಾಡಿರುವುದು ಅಂತರಾಷ್ಟ್ರೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಅಂತರಾಷ್ಟ್ರೀಯ ಬ್ಯಾಂಕಿಂಗ್ ನಿರ್ಬಂಧಗಳ ಹೊರತಾಗಿಯೂ, ಜಲಸಂಧಿಯ ಸುಂಕವನ್ನು ನಗದು ರೂಪದಲ್ಲೇ ಪಡೆಯಲಾಗಿದೆ ಮತ್ತು ಅದನ್ನು ಕೇಂದ್ರ ಬ್ಯಾಂಕ್ನ ಖಾತೆಗೆ ಜಮೆ ಮಾಡಲಾಗಿದೆ ಎಂದು ಬ್ಯಾಂಕ್ ಗವರ್ನರ್ ತಿಳಿಸಿದ್ದಾರೆ.
ಈ ಸುಂಕದ ಆದಾಯವು ಇರಾನ್ನ ಆರ್ಥಿಕತೆಗೆ ದೊಡ್ಡ ಬಲ ನೀಡಿದೆ. ಅಮೆರಿಕದ ಆರ್ಥಿಕ ನಿರ್ಬಂಧಗಳ ನಡುವೆಯೂ ದೇಶದ ಹಣಕಾಸು ಸ್ಥಿತಿ ಸ್ಥಿರವಾಗಿದೆ ಎಂದು ತೋರಿಸಲು ಇರಾನ್ ಈ ಮಾಹಿತಿಯನ್ನು ಹೊರಹಾಕಿದೆ.
ಹಾರ್ಮುಜ್ ಜಲಸಂಧಿಯು ತನ್ನ ಪ್ರಾದೇಶಿಕ ವ್ಯಾಪ್ತಿಗೆ ಬರುತ್ತದೆ ಎಂದು ಪ್ರತಿಪಾದಿಸುತ್ತಿರುವ ಇರಾನ್, ಅಲ್ಲಿ ಸಂಚರಿಸುವ ಹಡಗುಗಳಿಗೆ ಭದ್ರತೆ ನೀಡುವ ಪ್ರತಿಯಾಗಿ ಸುಂಕ ವಸೂಲಿ ಮಾಡುತ್ತಿದೆ. ಆದರೆ ಅಮೆರಿಕ ಈ ಸುಂಕವನ್ನು ‘ಅಕ್ರಮ’ ಎಂದು ಕರೆದಿದೆ.
ಅಮೆರಿಕದ ನೌಕಾಪಡೆಯು ಜಲಸಂಧಿಯನ್ನು ಸೀಲ್ ಮಾಡಿದ್ದರೂ ಸಹ, ಇರಾನ್ ಈ ಮಾರ್ಗದಿಂದ ಆದಾಯ ಗಳಿಸುತ್ತಿರುವುದು ಜಾಗತಿಕ ರಾಜತಾಂತ್ರಿಕ ಸಂಘರ್ಷವನ್ನು ಮತ್ತಷ್ಟು ಹೆಚ್ಚಿಸಿದೆ.





