ಲಂಡನ್: ಆರೋಗ್ಯವಾಗಿರಲು ಹಣ್ಣು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು ಎಂಬುದು ಸಾರ್ವಕಾಲಿಕ ನಂಬಿಕೆ. ಆದರೆ, ಅಮೆರಿಕದ ಯುಎಸ್ಸಿ ನಾರಿಸ್ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಸೆಂಟರ್ (USC Norris) ಇತ್ತೀಚೆಗೆ ಮಂಡಿಸಿರುವ ಸಂಶೋಧನಾ ವರದಿಯೊಂದು ಇದಕ್ಕೆ ವ್ಯತಿರಿಕ್ತವಾದ ಅಂಶವನ್ನು ಹೊರಹಾಕಿದ್ದು, ಜಗತ್ತನ್ನೇ ಬೆರಗುಗೊಳಿಸಿದೆ. ಹಣ್ಣು, ತರಕಾರಿ ಮತ್ತು ಧಾನ್ಯಗಳನ್ನು ಅತಿಯಾಗಿ ಸೇವಿಸುವ ಧೂಮಪಾನ ಮಾಡದ ಯುವಜನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈ ಅಧ್ಯಯನ ತಿಳಿಸಿದೆ.
ಆದರೆ, ಈ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಪಾಯವು ಹಣ್ಣು-ತರಕಾರಿಗಳಿಂದಲ್ಲ, ಬದಲಿಗೆ ಅವುಗಳನ್ನು ಬೆಳೆಯಲು ಬಳಸುವ ಕೀಟನಾಶಕಗಳಿಂದ (Pesticides) ಎಂಬುದು ಸ್ಪಷ್ಟವಾಗಿದೆ.
50 ವರ್ಷದೊಳಗಿನ, ಧೂಮಪಾನ ಮಾಡದ ಅಮೆರಿಕನ್ನರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗುತ್ತಿರುವುದಕ್ಕೆ ಅವರ ಆಹಾರ ಪದ್ಧತಿಯೂ ಒಂದು ಕಾರಣವಿರಬಹುದು ಎಂದು ಸಂಶೋಧಕರು ಶಂಕಿಸಿದ್ದಾರೆ.
ಸಂಶೋಧಕ ಜಾರ್ಜ್ ನೀವಾ ಅವರ ಪ್ರಕಾರ, ವಾಣಿಜ್ಯಿಕವಾಗಿ ಬೆಳೆಯುವ (Non-organic) ಹಣ್ಣು, ತರಕಾರಿ ಮತ್ತು ಧಾನ್ಯಗಳಲ್ಲಿ ಕೀಟನಾಶಕಗಳ ಅಂಶ ಹೆಚ್ಚಾಗಿರುತ್ತದೆ. ಮಾಂಸ ಅಥವಾ ಡೈರಿ ಉತ್ಪನ್ನಗಳಿಗಿಂತ ಇವುಗಳಲ್ಲಿ ಕೀಟನಾಶಕಗಳ ಶೇಷ (Residues) ಹೆಚ್ಚು ಕಾಲ ಉಳಿಯುತ್ತದೆ.
ಅಧ್ಯಯನದ ಪ್ರಕಾರ, ಮಹಿಳೆಯರು ಪುರುಷರಿಗಿಂತ ಹೆಚ್ಚು ಹಣ್ಣು-ತರಕಾರಿಗಳನ್ನು ಸೇವಿಸುವುದರಿಂದ, ಅವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಪಾಯ ಹೆಚ್ಚಾಗಿ ಕಂಡುಬಂದಿದೆ.
ಅಮೆರಿಕನ್ ಅಸೋಸಿಯೇಷನ್ ಫಾರ್ ಕ್ಯಾನ್ಸರ್ ರಿಸರ್ಚ್ನ ವಾರ್ಷಿಕ ಸಭೆಯಲ್ಲಿ ಈ ವರದಿಯನ್ನು ಮಂಡಿಸಲಾಗಿದ್ದು, ಇದು ಹಣ್ಣು-ತರಕಾರಿಗಳ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.






