ವಾಷಿಂಗ್ಟನ್: ಇರಾನ್ ಜೊತೆ ಹೊಸ ಪರಮಾಣು ಅಥವಾ ರಾಜತಾಂತ್ರಿಕ ಒಪ್ಪಂದಕ್ಕೆ ಬರುವವರೆಗೆ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಅಮೆರಿಕದ ನೌಕಾಪಡೆ ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, “ಯಾವುದೇ ಹಡಗು ಅಮೆರಿಕದ ಅನುಮತಿಯಿಲ್ಲದೆ ಈ ಮಾರ್ಗದಲ್ಲಿ ಪ್ರವೇಶಿಸುವಂತಿಲ್ಲ ಅಥವಾ ಹೊರಹೋಗುವಂತಿಲ್ಲ,” ಎಂದು ಘೋಷಿಸಿದ್ದಾರೆ.
ಇತ್ತೀಚೆಗೆ ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಎರಡು ಸರಕು ಸಾಗಣೆ ಹಡಗುಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಟ್ರಂಪ್ ಈ ಕಠಿಣ ನಿಲುವನ್ನು ತಳೆದಿದ್ದಾರೆ.ವಿಶ್ವದ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಅಮೆರಿಕದ ನೌಕಾಪಡೆ ಬಿಗಿಯಾಗಿ ಬಂದ್ ಮಾಡಿದೆ. ಇರಾನ್ ಒಂದು ‘ಡೀಲ್’ ಮಾಡಿಕೊಳ್ಳುವವರೆಗೆ ಇದು ಸಡಿಲವಾಗುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇರಾನ್ ಆಡಳಿತದ ಒಳಗೇ ಆಂತರಿಕ ಸಂಘರ್ಷ (Infighting) ನಡೆಯುತ್ತಿದೆ ಎಂದು ಟ್ರಂಪ್ ಟೀಕಿಸಿದ್ದಾರೆ. “ಇರಾನ್‌ಗೆ ತನ್ನ ನಾಯಕ ಯಾರು ಎಂಬುವುದೇ ತಿಳಿಯುತ್ತಿಲ್ಲ. ಅಲ್ಲಿ ತೀವ್ರ ಗೊಂದಲವಿದೆ,” ಎಂದು ಅವರು ಲೇವಡಿ ಮಾಡಿದ್ದಾರೆ.
ಏಪ್ರಿಲ್ 13 ರಿಂದಲೇ ಜಾರಿಗೆ ಬಂದಿರುವ ಈ ದಿಗ್ಬಂಧನದ ಮೂಲಕ ಇರಾನ್‌ನ ತೈಲ ರಫ್ತನ್ನು ಸಂಪೂರ್ಣವಾಗಿ ತಡೆಯುವುದು ಅಮೆರಿಕದ ಗುರಿಯಾಗಿದೆ. ಇರಾನ್‌ನ ಪ್ರಮುಖ ತೈಲ ಸಂಗ್ರಹಣಾ ಕೇಂದ್ರವಾಗಿರುವ ಖಾರ್ಗ್ ದ್ವೀಪದ ಮೇಲೂ ಟ್ರಂಪ್ ಕಣ್ಣಿಟ್ಟಿದ್ದಾರೆ.








