ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಇಸ್ರೇಲ್ ಮತ್ತು ಲೆಬನಾನ್‌ನ ಹಿಜ್ಬುಲ್ಲಾ ನಡುವಿನ ಕದನ ವಿರಾಮವನ್ನು ಇನ್ನೂ ಮೂರು ವಾರಗಳ ಕಾಲ ವಿಸ್ತರಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ.
ವೈಟ್ ಹೌಸ್‌ನಲ್ಲಿ ಇಸ್ರೇಲ್ ಮತ್ತು ಲೆಬನಾನ್ ರಾಯಭಾರಿಗಳೊಂದಿಗೆ ನಡೆಸಿದ ಸುದೀರ್ಘ ರಾಜತಾಂತ್ರಿಕ ಮಾತುಕತೆಯ ನಂತರ ಟ್ರಂಪ್ ಈ ನಿರ್ಧಾರವನ್ನು ಪ್ರಕಟಿಸಿದರು.
ರಾಜತಾಂತ್ರಿಕ ಯಶಸ್ಸು: ವೈಟ್ ಹೌಸ್‌ನಲ್ಲಿ ನಡೆದ ಈ ಸಭೆಯು ಅತ್ಯಂತ ಯಶಸ್ವಿಯಾಗಿದೆ ಎಂದು ಟ್ರಂಪ್ ಬಣ್ಣಿಸಿದ್ದಾರೆ. ದಶಕಗಳ ನಂತರ ಉಭಯ ದೇಶಗಳ ನಡುವೆ ನಡೆದ ಮೊದಲ ನೇರ ರಾಜತಾಂತ್ರಿಕ ಚರ್ಚೆ ಇದಾಗಿದೆ.
ಕೇವಲ 10 ದಿನಗಳ ಅವಧಿಗೆ ಅನ್ವಯವಾಗಿದ್ದ ತಾತ್ಕಾಲಿಕ ಕದನ ವಿರಾಮವು ಮುಕ್ತಾಯಗೊಳ್ಳುವ ಹಂತದಲ್ಲಿತ್ತು. ಈಗಿನ ವಿಸ್ತರಣೆಯು ಶಾಶ್ವತ ಶಾಂತಿ ಒಪ್ಪಂದಕ್ಕೆ ಪೂರಕವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
“ಹಿಜ್ಬುಲ್ಲಾ ಪ್ರಭಾವದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಮೆರಿಕವು ಲೆಬನಾನ್‌ಗೆ ಸಂಪೂರ್ಣ ಸಹಕಾರ ನೀಡಲಿದೆ,” ಎಂದು ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.








