ವಾಷಿಂಗ್ಟನ್: ಭಾರತ ಮತ್ತು ಚೀನಾವನ್ನು “ನರಕದ ಕೂಪಗಳು” ಎಂದು ಟೀಕಿಸಿದ್ದ ಪೋಸ್ಟ್ ಅನ್ನು ಹಂಚಿಕೊಳ್ಳುವ ಮೂಲಕ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. “ಭಾರತವು ಒಂದು ಮಹಾನ್ ದೇಶ” ಎಂದು ಹೇಳುವ ಮೂಲಕ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಇತ್ತೀಚೆಗೆ ಅಮೆರಿಕದ ‘ಜನ್ಮಸಿದ್ಧ ಪೌರತ್ವ’ದ ಕುರಿತಾದ ಚರ್ಚೆಯ ವೇಳೆ, ಭಾರತದಂತಹ ದೇಶಗಳನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದ ರೇಡಿಯೋ ಸಂಭಾಷಣೆಯ ತುಣುಕನ್ನು ಟ್ರಂಪ್ ರೀ-ಪೋಸ್ಟ್ ಮಾಡಿದ್ದರು. ಇದು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಪ್ರಧಾನಿ ಮೋದಿ ಅವರು ಅಮೆರಿಕ ಅಧ್ಯಕ್ಷರ ಮುಂದೆ ಪ್ರತಿಭಟನೆ ದಾಖಲಿಸಬೇಕೆಂದು ಒತ್ತಾಯಿಸಿದ್ದವು.
ವಿವಾದ ತಾರಕಕ್ಕೇರುತ್ತಿದ್ದಂತೆ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೂಲಕ ಟ್ರಂಪ್ ತಮ್ಮ ಸಂದೇಶ ರವಾನಿಸಿದ್ದಾರೆ. “ಭಾರತವು ಅತ್ಯಂತ ಮಹಾನ್ ದೇಶವಾಗಿದ್ದು, ಅಲ್ಲಿ ನನ್ನ ಬಹಳ ಆತ್ಮೀಯ ಸ್ನೇಹಿತ (ಪ್ರಧಾನಿ ಮೋದಿ) ಅಧಿಕಾರದಲ್ಲಿದ್ದಾರೆ. ಅವರು ಅದ್ಭುತವಾದ ಕೆಲಸ ಮಾಡುತ್ತಿದ್ದಾರೆ,” ಎಂದು ಟ್ರಂಪ್ ಪ್ರಶಂಸಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ತಮ್ಮ ನಡುವಿನ ವೈಯಕ್ತಿಕ ಸ್ನೇಹವನ್ನು ನೆನಪಿಸುವ ಮೂಲಕ ಟ್ರಂಪ್ ಭಾರತೀಯರ ಆಕ್ರೋಶವನ್ನು ಶಮನಗೊಳಿಸಲು ಯತ್ನಿಸಿದ್ದಾರೆ.ತಮ್ಮ ಪೋಸ್ಟ್ ಭಾರತದ ವಿರುದ್ಧವಾಗಿರಲಿಲ್ಲ, ಬದಲಾಗಿ ಅಮೆರಿಕದ ಪೌರತ್ವ ನೀತಿ ಮತ್ತು ವಲಸೆ ಕಾನೂನುಗಳ ಬಗ್ಗೆ ಇತ್ತು ಎಂಬ ಸುಳಿವನ್ನು ಅಮೆರಿಕದ ಅಧಿಕಾರಿಗಳು ನೀಡಿದ್ದಾರೆ.
ಟ್ರಂಪ್ ಅವರ ಈ ಸ್ಪಷ್ಟನೆಯಿಂದಾಗಿ ಕಳೆದ 24 ಗಂಟೆಗಳಿಂದ ಉಭಯ ದೇಶಗಳ ನಡುವೆ ಉಂಟಾಗಿದ್ದ ರಾಜತಾಂತ್ರಿಕ ಮುಜುಗರ ಸದ್ಯಕ್ಕೆ ದೂರಾದಂತಿದೆ.








