ಮುಂಬೈ: ಐಪಿಎಲ್ 2026ರ ಬಹುನಿರೀಕ್ಷಿತ ಮುಂಬೈ ಇಂಡಿಯನ್ಸ್ (MI) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯಕ್ಕೆ ವಾಂಖೆಡೆ ಕ್ರೀಡಾಂಗಣ ಸಜ್ಜಾಗಿದೆ. ಆದರೆ, ಈ ‘ಎಲ್ ಕ್ಲಾಸಿಕೋ’ ಸಮರದಲ್ಲಿ ಕಣಕ್ಕಿಳಿಯಬೇಕಿದ್ದ ಚೆನ್ನೈ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ಅವರು ಸ್ನಾಯು ಸೆಳೆತದ (Calf Injury) ಸಮಸ್ಯೆಯಿಂದಾಗಿ ಈ ಪಂದ್ಯದಿಂದಲೂ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.
ಸೀಸನ್ ಆರಂಭಕ್ಕೂ ಮುನ್ನವೇ ಎದುರಾಗಿದ್ದ ಸ್ನಾಯು ಸೆಳೆತದಿಂದ ಧೋನಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ವಾಂಖೆಡೆಯಲ್ಲಿ ನಡೆದ ಅಭ್ಯಾಸದ ವೇಳೆ ಅವರು ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ನಡೆಸಿದ್ದರಾದರೂ, ಪಂದ್ಯದ ಒತ್ತಡ ತಡೆದುಕೊಳ್ಳಲು ಅವರು ಇನ್ನೂ ಸಿದ್ಧವಾಗಿಲ್ಲ ಎಂದು ವೈದ್ಯಕೀಯ ತಂಡ ತಿಳಿಸಿದೆ.
ಐಪಿಎಲ್ 2026ರ ಆವೃತ್ತಿಯಲ್ಲಿ ಸಿಎಸ್‌ಕೆ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಧೋನಿ ಆಡಿರಲಿಲ್ಲ. ಇಂದಿನ ಮುಂಬೈ ವಿರುದ್ಧದ ಪಂದ್ಯದ ಮೂಲಕ ಅವರು ಮೈದಾನಕ್ಕೆ ಮರಳುತ್ತಾರೆ ಎಂಬ ಭಾರಿ ನಿರೀಕ್ಷೆ ಇತ್ತು. ಆದರೆ, ಅಭಿಮಾನಿಗಳ ಆಸೆಗೆ ಈಗ ತಣ್ಣೀರು ಎರಚಿದಂತಾಗಿದೆ.
ಮೂಲಗಳ ಪ್ರಕಾರ, ಧೋನಿ ಅವರು ಏಪ್ರಿಲ್ 26 ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿರುವ ‘ಗುಜರಾತ್ ಟೈಟಾನ್ಸ್’ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
ಪ್ರಸಕ್ತ ಸೀಸನ್‌ನಲ್ಲಿ ಸಿಎಸ್‌ಕೆ 6 ಪಂದ್ಯಗಳಲ್ಲಿ ಕೇವಲ 2 ಜಯದೊಂದಿಗೆ ಅಂಕಪಟ್ಟಿಯಲ್ಲಿ ಕೆಳಸ್ಥಾನದಲ್ಲಿದೆ. ತಂಡದ ಮಧ್ಯಮ ಕ್ರಮಾಂಕವು ಫಿನಿಶಿಂಗ್ ಹಂತದಲ್ಲಿ ಪರದಾಡುತ್ತಿದ್ದು, ಧೋನಿ ಅವರ ಗೈರುಹಾಜರಿ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.








