ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಮೇ 4 ಟಿಎಂಸಿ ಸಿಂಡಿಕೇಟ್ ರಾಜ್ ಮತ್ತು ಜಂಗಲ್ ರಾಜ್ನ ಅಂತ್ಯದ ದಿನ (Expiry Date)” ಎಂದು ಅವರು ಗುಡುಗಿದ್ದಾರೆ.
ಮೇ 4 ರಂದು ಚುನಾವಣಾ ಫಲಿತಾಂಶ ಹೊರಬರಲಿದ್ದು, ಅಂದು ಟಿಎಂಸಿಯ ‘ದೌರ್ಜನ್ಯದ ಆಡಳಿತ’ ಕೊನೆಗೊಳ್ಳಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಅಂದಿನಿಂದ ಟಿಎಂಸಿ ನಡೆಸಿದ ಪ್ರತಿಯೊಂದು ಲೂಟಿ ಮತ್ತು ಅಕ್ರಮಗಳ ಬಗ್ಗೆ ಲೆಕ್ಕಾಚಾರ ಆರಂಭವಾಗಲಿದೆ ಎಂದು ಎಚ್ಚರಿಸಿದರು.
ಇಂದು ನಡೆದ ಮೊದಲ ಹಂತದ ಮತದಾನದಲ್ಲಿ ಮಹಿಳೆಯರು ಮತ್ತು ಯುವಕರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗೆ ಬರುತ್ತಿರುವುದು ರಾಜ್ಯದಲ್ಲಿ ಬದಲಾವಣೆಯ ಬಿರುಗಾಳಿ ಎದ್ದಿರುವುದಕ್ಕೆ ಸಾಕ್ಷಿ. “ಭಯ ಸೋಲುತ್ತಿದೆ, ಭರವಸೆ ಗೆಲ್ಲುತ್ತಿದೆ” ಎಂದು ಅವರು ಹೇಳಿದರು.
ಸಂದೇಶ್ಖಾಲಿ ಮತ್ತು ಆರ್.ಜಿ. ಕರ್ ಆಸ್ಪತ್ರೆಯ ಘಟನೆಗಳನ್ನು ಉಲ್ಲೇಖಿಸಿದ ಪ್ರಧಾನಿ, ಬಂಗಾಳದ ತಾಯಂದಿರು ಮತ್ತು ಹೆಣ್ಣುಮಕ್ಕಳು ಟಿಎಂಸಿಯ ಅಸೂಕ್ಷ್ಮ ಆಡಳಿತವನ್ನು ಎಂದಿಗೂ ಮರೆಯುವುದಿಲ್ಲ. ಮಹಿಳಾ ವಿರೋಧಿ ಮುಖ ಹೊಂದಿರುವ ಈ ಸರ್ಕಾರವನ್ನು ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ ಎಂದರು.
ಬಂಗಾಳದ ಪರಂಪರೆಯನ್ನು ಉಳಿಸಲು ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಬಿಜೆಪಿಗೆ ಮತ ನೀಡುವಂತೆ ಅವರು ಮನವಿ ಮಾಡಿದರು. ಪ್ರತಿ ಕೆಲಸಕ್ಕೂ ‘ಕಟ್ ಮನಿ’ ಕೇಳುವ ಸಂಸ್ಕೃತಿಗೆ ಮೇ 4 ರಂದು ಅಂತಿಮ ತೆರೆ ಬೀಳಲಿದೆ ಎಂದು ಅವರು ಭವಿಷ್ಯ ನುಡಿದರು.







