ನವದೆಹಲಿ: ಭಾರತವು ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಇಂಧನ ಸ್ವಾವಲಂಬನೆ ಸಾಧಿಸಲು ದೊಡ್ಡ ಹೆಜ್ಜೆ ಇಟ್ಟಿದೆ. ಕೇಂದ್ರ ಸರ್ಕಾರವು ಈಗ ಇ-100 (100% ಎಥೆನಾಲ್) ಇಂಧನ ಬಳಕೆಗೆ ಉತ್ತೇಜನ ನೀಡುತ್ತಿದ್ದು, ವಿಮಾನಯಾನ ಇಂಧನದಲ್ಲೂ (ATF) ಎಥೆನಾಲ್ ಮಿಶ್ರಣ ಮಾಡಲು ಅಧಿಕೃತವಾಗಿ ಅನುಮತಿ ನೀಡಿದೆ.
ಕೇವಲ ಪೆಟ್ರೋಲ್ ಮಾತ್ರವಲ್ಲದೆ, 100% ಎಥೆನಾಲ್‌ನಿಂದಲೂ ಚಲಿಸಬಲ್ಲ ‘ಫ್ಲೆಕ್ಸ್ ಫ್ಯುಯೆಲ್ ವಾಹನಗಳ’ (FFV) ಉತ್ಪಾದನೆಗೆ ಆಟೋಮೊಬೈಲ್ ಕಂಪನಿಗಳಿಗೆ ಸರ್ಕಾರ ಸೂಚನೆ ನೀಡಿದೆ. ಇಂತಹ ವಾಹನಗಳು ಪೆಟ್ರೋಲ್ ಮತ್ತು ಎಥೆನಾಲ್‌ನ ಯಾವುದೇ ಪ್ರಮಾಣದ ಮಿಶ್ರಣದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ.
ಪೆಟ್ರೋಲಿಯಂ ಸಚಿವಾಲಯವು ಹೊರಡಿಸಿರುವ ಹೊಸ ಅಧಿಸೂಚನೆಯಂತೆ, ಇನ್ಮುಂದೆ ವಿಮಾನಗಳಲ್ಲಿ ಬಳಸುವ ಇಂಧನದಲ್ಲೂ (Aviation Turbine Fuel) ಎಥೆನಾಲ್ ಅಥವಾ ಸಿಂಥೆಟಿಕ್ ಹೈಡ್ರೋಕಾರ್ಬನ್‌ಗಳನ್ನು ಮಿಶ್ರಣ ಮಾಡಲು ಅವಕಾಶ ನೀಡಲಾಗಿದೆ. ಇದು ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ‘ಸಸ್ಟೈನಬಲ್ ಏವಿಯೇಷನ್ ಫ್ಯುಯೆಲ್’ (SAF) ಬಳಕೆಗೆ ಸಹಕಾರಿಯಾಗಲಿದೆ.
ಭಾರತವು ತನ್ನ ಒಟ್ಟು ಕಚ್ಚಾ ತೈಲ ಅಗತ್ಯದ ಸುಮಾರು 87% ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಎಥೆನಾಲ್ ಮಿಶ್ರಣದ ಪ್ರಮಾಣವನ್ನು ಹೆಚ್ಚಿಸುವುದರಿಂದ ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿತಾಯವಾಗಲಿದೆ.
ಎಥೆನಾಲ್ ಅನ್ನು ಮುಖ್ಯವಾಗಿ ಕಬ್ಬು, ಮೆಕ್ಕೆಜೋಳ ಮತ್ತು ಇತರ ಕೃಷಿ ತ್ಯಾಜ್ಯಗಳಿಂದ ತಯಾರಿಸುವುದರಿಂದ, ಈ ಯೋಜನೆಯು ದೇಶದ ರೈತರ ಆದಾಯವನ್ನು ಹೆಚ್ಚಿಸಲು ನೇರವಾಗಿ ನೆರವಾಗಲಿದೆ.








