ಪಾಟ್ನಾ:ಮಹಿಳಾ ರಾಜಕಾರಣಿಗಳ ಕುರಿತು ನೀಡಿದ್ದ ‘ಬೆಡ್‌ರೂಮ್’ ಹೇಳಿಕೆಯಿಂದ ವಿವಾದಕ್ಕೆ ಸಿಲುಕಿದ್ದ ಬಿಹಾರದ ಪಕ್ಷೇತರ ಸಂಸದ ಪಪ್ಪು ಯಾದವ್, ಈಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಬಿಹಾರ ರಾಜ್ಯ ಮಹಿಳಾ ಆಯೋಗವು ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯಿಸುವಾಗ, “ದೇಶದ ಶೇ. 70 ರಿಂದ 80 ರಷ್ಟು ರಾಜಕಾರಣಿಗಳು ಅಶ್ಲೀಲ ಚಿತ್ರಗಳನ್ನು (Porn) ವೀಕ್ಷಿಸುತ್ತಾರೆ” ಎಂದು ಹೇಳುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.
ಮಹಿಳಾ ಆಯೋಗದ ನೋಟಿಸ್‌ಗೆ ಕಿಡಿಕಾರಿದ ಪಪ್ಪು ಯಾದವ್, “ನನ್ನ ಫೋನ್ ಮಾತ್ರವಲ್ಲ, ಎಲ್ಲ ರಾಜಕಾರಣಿಗಳ ಫೋನ್ ತಪಾಸಣೆ ಮಾಡಿ. ಶೇ. 80 ರಷ್ಟು ಮಂದಿ ಪೋರ್ನ್ ನೋಡುವುದು ಸಾಬೀತಾಗುತ್ತದೆ. ನಾನು ಈ ಮಾತನ್ನು ಸಂಸತ್ತಿನಲ್ಲೂ ಹೇಳಿದ್ದೇನೆ” ಎಂದು ಸವಾಲು ಹಾಕಿದ್ದಾರೆ.
ಎರಡು ದಿನಗಳ ಹಿಂದೆ, “ಶೇ. 90 ರಷ್ಟು ಮಹಿಳೆಯರು ಪುರುಷ ನಾಯಕರ ಕೋಣೆಗಳಿಗೆ ಹೋಗದೆ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಿಲ್ಲ” ಎಂಬ ಕೀಳುಮಟ್ಟದ ಹೇಳಿಕೆ ನೀಡಿದ್ದರು. ಇದಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
“ಸಮಾಜ ಮತ್ತು ರಾಜಕೀಯ ವ್ಯವಸ್ಥೆಯು ಮಹಿಳೆಯರನ್ನು ಶೋಷಿಸುತ್ತಿದೆ. ನಾನು ಮಹಿಳೆಯರ ಪರವಾಗಿಯೇ ಮಾತನಾಡುತ್ತಿದ್ದೇನೆ. 755 ಸಂಸದರ ಮೇಲೆ ಲೈಂಗಿಕ ಕಿರುಕುಳದ ಆರೋಪಗಳಿವೆ, ಇದಕ್ಕೇನು ಹೇಳುತ್ತೀರಿ?” ಎಂದು ಅವರು ಪ್ರಶ್ನಿಸಿದ್ದಾರೆ.








