ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಸಿಹಿಯನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಆ ಸಿಹಿಯೇ ಮಾರಕವಾದರೆ? ಭಾರತದ ಜನಪ್ರಿಯ ಸಿಹಿ ತಿಂಡಿಯಾದ ಜಲೇಬಿಯನ್ನು ಜನರು ಮೊಸರು ಅಥವಾ ರಬಡಿಯೊಂದಿಗೆ ಸವಿಯುತ್ತಾರೆ. ಆದರೆ ಹೈದರಾಬಾದ್‌ನಲ್ಲಿ 33 ವರ್ಷದ ವ್ಯಕ್ತಿಯೊಬ್ಬರು ಜಲೇಬಿ ಮತ್ತು ರಬಡಿ ತಿಂದ ನಂತರ ಪಾರ್ಶ್ವವಾಯುವಿಗೆ ಒಳಗಾದ ವಿಲಕ್ಷಣ ಘಟನೆ ನಡೆದಿದೆ.
ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯ ನ್ಯೂರೋಲಜಿಸ್ಟ್ ಡಾ. ಸುಧೀರ್ ಕುಮಾರ್ ಅವರು ಈ ಪ್ರಕರಣದ ಬಗ್ಗೆ ಎಕ್ಸ್ (ಟ್ವಿಟರ್) ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಘಟನೆ?
33 ವರ್ಷದ ರವಿ ಎಂಬ ವ್ಯಕ್ತಿ ಮದುವೆ ಸಮಾರಂಭವೊಂದರಲ್ಲಿ ಜಲೇಬಿ ಮತ್ತು ರಬಡಿ ತಿಂದಿದ್ದರು. ತಿಂದ ಸ್ವಲ್ಪ ಸಮಯದ ನಂತರ ಅವರಿಗೆ ವಿಪರೀತ ಸುಸ್ತು ಕಾಣಿಸಿಕೊಂಡಿತು. ಕೈಕಾಲುಗಳು ಭಾರವೆನಿಸಿ, ಎದ್ದು ನಿಲ್ಲಲು ಸಾಧ್ಯವಾಗದ ಸ್ಥಿತಿ ತಲುಪಿದರು. ಅಂತಿಮವಾಗಿ ಅವರು ಕೈ ಎತ್ತಲು ಸಹ ಅಸಮರ್ಥರಾದರು. ವಿಶೇಷವೆಂದರೆ ಅವರಿಗೆ ಯಾವುದೇ ನೋವು ಇರಲಿಲ್ಲ ಅಥವಾ ಮಾತನಾಡಲು ತೊಂದರೆಯಿರಲಿಲ್ಲ. ಮೊದಲ ಎರಡು ಬಾರಿ ಮದುವೆಗೆ ಹೋದಾಗ ಹೀಗಾದಾಗ ಅವರು ಫುಡ್ ಪಾಯಿಸನಿಂಗ್ ಎಂದು ಭಾವಿಸಿದ್ದರು. ಆದರೆ ಮೂರನೇ ಬಾರಿ ಮನೆಯಲ್ಲಿ ಜಲೇಬಿ ತಿಂದಾಗಲೂ ಇದೇ ಸ್ಥಿತಿ ಮರುಕಳಿಸಿದಾಗ ಅವರು ಆಸ್ಪತ್ರೆಗೆ ಧಾವಿಸಿದರು.
ತಪಾಸಣೆಯಲ್ಲಿ ಕಂಡುಬಂದಿದ್ದೇನು?
ಡಾ. ಸುಧೀರ್ ಕುಮಾರ್ ಅವರು ರಕ್ತದ ಪರೀಕ್ಷೆ, ಇಸಿಜಿ ಮತ್ತು ನರಮಂಡಲದ ತಪಾಸಣೆ ನಡೆಸಿದಾಗ ಇದೊಂದು ಅಪರೂಪದ ವೈದ್ಯಕೀಯ ಸ್ಥಿತಿ ಎಂದು ತಿಳಿದುಬಂದಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಹೈಪೋಕೆಲೆಮಿಕ್ ಪಾರ್ಶ್ವವಾಯು’ (Hypokalemic Paralysis) ಎಂದು ಕರೆಯಲಾಗುತ್ತದೆ.
ಕಾರಣಗಳೇನು?
ಎಲೆಕ್ಟ್ರೋಲೈಟ್ ಅಸಮತೋಲನ: ಈ ಸ್ಥಿತಿಯಲ್ಲಿ ಯಾವುದೇ ನರಗಳು ಹಾನಿಗೊಳಗಾಗಿರುವುದಿಲ್ಲ, ಬದಲಿಗೆ ದೇಹದಲ್ಲಿನ ಎಲೆಕ್ಟ್ರೋಲೈಟ್ ವ್ಯತ್ಯಾಸವಾಗುತ್ತದೆ.
ಪೊಟ್ಯಾಸಿಯಮ್ ಕೊರತೆ: ರಕ್ತದಲ್ಲಿ ಪೊಟ್ಯಾಸಿಯಮ್ ಮಟ್ಟ ಹಠಾತ್ ಕುಸಿದಾಗ ಹೀಗಾಗುತ್ತದೆ.
ಅತಿಯಾದ ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆ: ಜಲೇಬಿ ಮತ್ತು ರಬಡಿಯಲ್ಲಿ ಅತಿಯಾದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್ ಇರುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ರಕ್ತದಲ್ಲಿನ ಪೊಟ್ಯಾಸಿಯಮ್ ಕೋಶಗಳ ಒಳಗೆ ಹೋಗುತ್ತದೆ. ರಕ್ತದಲ್ಲಿ ಪೊಟ್ಯಾಸಿಯಮ್ ಕಡಿಮೆಯಾದಾಗ ಸ್ನಾಯುಗಳು ಕೆಲಸ ಮಾಡುವುದನ್ನು ನಿಲ್ಲಿಸಿ ಪಾರ್ಶ್ವವಾಯುವಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಗಮನಿಸಿ: ಇದು ಎಲ್ಲರಿಗೂ ಆಗುವುದಿಲ್ಲ. ಯಾರು ಮೊದಲೇ ಇಂತಹ ಜೆನೆಟಿಕ್ ಸಮಸ್ಯೆ ಅಥವಾ ಪೊಟ್ಯಾಸಿಯಮ್ ಕೊರತೆಯ ಅಪಾಯ ಹೊಂದಿರುತ್ತಾರೋ ಅಂತಹವರಲ್ಲಿ ಮಾತ್ರ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಕ್ಕರೆ ಅಂಶ ಹೆಚ್ಚಿರುವ ಆಹಾರ ಸೇವಿಸುವಾಗ ಎಚ್ಚರಿಕೆ ಅಗತ್ಯ ಎಂದು ವೈದ್ಯರು ತಿಳಿಸಿದ್ದಾರೆ.
Devouring his favorite #sweets used to leave a young man #paralyzed
1. 33-year old Ravi loved jalebi with rabdi, but there was a problem. Whenever he used to have jalebi-rabdi to his heart's content, his legs & arms would become weak, making him bed bound for several hours.
— Dr Sudhir Kumar MD DM (@hyderabaddoctor) March 28, 2023








