ಇಸ್ಲಾಮಾಬಾದ್: ದಶಕಗಳ ಕಾಲದ ವೈರತ್ವ ಮರೆತು ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧ ಸುಧಾರಣೆಗೆ ವೇದಿಕೆ ಸಿದ್ಧವಾಗಿದ್ದು, ನಾಳೆಯಿಂದ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಎರಡನೇ ಸುತ್ತಿನ ಶಾಂತಿ ಮಾತುಕತೆಗಳು ಆರಂಭವಾಗಲಿವೆ. ಈ ಮಹತ್ವದ ಸಭೆಯಲ್ಲಿ ಭಾಗವಹಿಸಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ (JD Vance) ಅವರು ಈಗಾಗಲೇ ಪ್ರಯಾಣ ಬೆಳೆಸಿದ್ದಾರೆ.
ಈ ಹಿಂದೆ ಮಾತುಕತೆಯಿಂದ ದೂರ ಉಳಿಯುವ ಮುನ್ಸೂಚನೆ ನೀಡಿದ್ದ ಇರಾನ್, ಈಗ ಅಧಿಕೃತ ನಿಯೋಗವನ್ನು ಕಳುಹಿಸಲು ಸಮ್ಮತಿಸಿದೆ. ಇದು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ದೊಡ್ಡ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಈ ಸಂಧಾನ ಪ್ರಕ್ರಿಯೆಯಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸುತ್ತಿದ್ದು, ಇಸ್ಲಾಮಾಬಾದ್‌ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.ಇರಾನ್ ಮೇಲಿನ ಆರ್ಥಿಕ ನಿರ್ಬಂಧಗಳ ಸಡಿಲಿಕೆ, ಪರಮಾಣು ಒಪ್ಪಂದದ ಪುನರ್ ಪರಿಶೀಲನೆ ಮತ್ತು ಗಲ್ಫ್ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ತಗ್ಗಿಸುವ ಬಗ್ಗೆ ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.
ಅಧ್ಯಕ್ಷ ಟ್ರಂಪ್ ಅವರ ನಂಬಿಕಸ್ತ ನಾಯಕ ಜೆ.ಡಿ. ವ್ಯಾನ್ಸ್ ಅವರ ಉಪಸ್ಥಿತಿಯು ಈ ಮಾತುಕತೆಯನ್ನು ಅಮೆರಿಕ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ತೋರಿಸುತ್ತದೆ. “ಅಮೆರಿಕದ ಹಿತಾಸಕ್ತಿಗಳಿಗೆ ಧಕ್ಕೆ ಬರದಂತೆ ಪ್ರಾದೇಶಿಕ ಶಾಂತಿಯನ್ನು ಕಾಪಾಡುವುದು ನಮ್ಮ ಗುರಿ” ಎಂಬ ಸಂದೇಶದೊಂದಿಗೆ ವ್ಯಾನ್ಸ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.








