ಬೆಳಗಾವಿ : ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ಗೆ ಕೋಳಿ ಸಾಗಿಸುತ್ತಿದ್ದ ಗೂಡ್ಸ್ ವಾಹನ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಬೆಳಗಾವಿ ನಗರದ ಯಡಿಯೂರಪ್ಪ ಮಾರ್ಗದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಘಡ ಸಂಭವಿಸಿದೆ.
ಬೆಳಗಿನ ಜಾವ ನಿದ್ರೆಯ ಮಂಪರಿನಲ್ಲಿದ್ದ ಚಾಲಕ ನಿಯಂತ್ರಣ ತಪ್ಪಿ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.ಅಪಘಾತದ ರಭಸಕ್ಕೆ ಚಾಲಕನ ಪಕ್ಕದಲ್ಲಿದ್ದ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದರೆ, ಚಾಲಕನ ಸ್ಥಿತಿ ಗಂಭೀರವಾಗಿದೆ. ಅಪಘಾತದಿಂದಾಗಿ ವಾಹನವೂ ನಜ್ಜುಗುಜ್ಜಾಗಿದ್ದು, ವಾಹನದೊಳಗಿನಿಂದ ಗಾಯಾಳು ಹಾಗೂ ಮೃತಪಟ್ಟವರನ್ನು ಹೊರತೆಗೆದು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಅಪಘಾತಕ್ಕೀಡಾದ ಈ ಗೂಡ್ಸ್ ಗಾಡಿ ಕೊಲ್ಲಾಪುರದಿಂದ ಶಿವಮೊಗ್ಗದ ಸೊರಬಕ್ಕೆ ಹೋಗ್ತಿತ್ತು. ಕೋಳಿ ತುಂಬಿಸಿಕೊಂಡು ಹೋಗುತ್ತಿದ್ದ ಈ ಲಾರಿ ಡಿಕ್ಕಿ ಹೊಡೆದ ಪರಿಣಾಮ ನೂರಾರು ಕೋಳಿಗಳು ಕೂಡ ಸಾವನ್ನಪ್ಪಿವೆ. ಘಟನಾ ಸ್ಥಳಕ್ಕೆ ಹಿರೇಬಾಗೆವಾಡಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಿರೇಬಾಗೆವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








