ಕ್ಯಾಲಿಫೋರ್ನಿಯಾ:ಜಾಗತಿಕ ತಂತ್ರಜ್ಞಾನ ದೈತ್ಯ ಆಪಲ್ (Apple) ಸಂಸ್ಥೆಯ ನಾಯಕತ್ವದಲ್ಲಿ ಐತಿಹಾಸಿಕ ಬದಲಾವಣೆಯಾಗುತ್ತಿದೆ. ದಶಕಕ್ಕೂ ಹೆಚ್ಚು ಕಾಲ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಟಿಮ್ ಕುಕ್ ಅವರು ಸಿಇಒ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದು, ಹಾರ್ಡ್ವೇರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಜಾನ್ ಟೆರ್ನಸ್ (John Ternus) ಅವರನ್ನು ನೂತನ ಸಿಇಒ ಆಗಿ ಘೋಷಿಸಲಾಗಿದೆ.
ಜಾನ್ ಟೆರ್ನಸ್ ಅವರು ಸೆಪ್ಟೆಂಬರ್ 1, 2026 ರಿಂದ ಅಧಿಕೃತವಾಗಿ ಆಪಲ್ನ ಸಿಇಒ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.ಸಿಇಒ ಸ್ಥಾನ ಬಿಟ್ಟ ನಂತರ ಟಿಮ್ ಕುಕ್ ಅವರು ಆಪಲ್ ಮಂಡಳಿಯ ಕಾರ್ಯಕಾರಿ ಅಧ್ಯಕ್ಷರಾಗಿ (Executive Chairman) ಮುಂದುವರಿಯಲಿದ್ದಾರೆ. ಅವರು ಜಾಗತಿಕ ನೀತಿ ನಿರೂಪಣೆ ಮತ್ತು ಸರ್ಕಾರಗಳೊಂದಿಗಿನ ಸಂಬಂಧಗಳ ಮೇಲೆ ಗಮನ ಹರಿಸಲಿದ್ದಾರೆ.
ಆಪಲ್ನಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಟೆರ್ನಸ್, ಐಫೋನ್, ಐಪ್ಯಾಡ್ ಮತ್ತು ಏರ್ಪಾಡ್ಸ್ ಸೇರಿದಂತೆ ಆಪಲ್ನ ಅತ್ಯಂತ ಯಶಸ್ವಿ ಉತ್ಪನ್ನಗಳ ವಿನ್ಯಾಸದ ರೂವಾರಿಯಾಗಿದ್ದಾರೆ.








