ನವದೆಹಲಿ: ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಭೀತಿ ಹಾಗೂ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನದ ನಡುವೆ, ಇರಾನ್‌ನಲ್ಲಿ ಸಿಲುಕಿದ್ದ 300ಕ್ಕೂ ಹೆಚ್ಚು ಭಾರತೀಯರನ್ನು ಭಾರತ ಸರ್ಕಾರವು ಯಶಸ್ವಿಯಾಗಿ ಸ್ಥಳಾಂತರಿಸಿದೆ. ವಿಮಾನಯಾನಕ್ಕೆ ಅಡ್ಡಿ ಇರುವುದರಿಂದ ಇರಾನ್‌ನಿಂದ ರಸ್ತೆ ಮಾರ್ಗದ ಮೂಲಕ ಅಜರ್‌ಬೈಜಾನ್‌ಗೆ ಕರೆತಂದು, ಅಲ್ಲಿಂದ ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಕರೆತರಲಾಗಿದೆ.
ಇರಾನ್‌ನ ವಾಯುಪ್ರದೇಶದಲ್ಲಿ ಹಾರಾಟಕ್ಕೆ ನಿರ್ಬಂಧವಿರುವ ಕಾರಣ, ಭಾರತೀಯ ರಾಯಭಾರ ಕಚೇರಿಯು ಅಜರ್‌ಬೈಜಾನ್ ಸರ್ಕಾರದ ನೆರವಿನೊಂದಿಗೆ ಈ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಇರಾನ್‌ನಿಂದ ಬಸ್ಸುಗಳ ಮೂಲಕ ಭಾರತೀಯರನ್ನು ಅಜರ್‌ಬೈಜಾನ್‌ನ ಗಡಿಗೆ ತಲುಪಿಸಲಾಯಿತು.
ಸ್ಥಳಾಂತರಗೊಂಡವರಲ್ಲಿ ಹೆಚ್ಚಿನವರು ಇರಾನ್‌ನಲ್ಲಿ ಉದ್ಯೋಗ ಮಾಡುತ್ತಿದ್ದವರು, ಪ್ರವಾಸಿಗರು ಮತ್ತು ಅಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು (MEA) ಇರಾನ್‌ನಲ್ಲಿ ಇನ್ನೂ ಬಾಕಿ ಉಳಿದಿರುವ ಸುಮಾರು 4,000ಕ್ಕೂ ಹೆಚ್ಚು ಭಾರತೀಯರ ಮೇಲೆ ನಿಗಾ ಇಟ್ಟಿದ್ದು, ಹಂತ-ಹಂತವಾಗಿ ಎಲ್ಲರನ್ನೂ ಸ್ಥಳಾಂತರಿಸುವ ಯೋಜನೆಯಲ್ಲಿದೆ.
ರಾಜಧಾನಿ ಬಾಕುನಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ರಕ್ಷಣಾ ಕಾರ್ಯಾಚರಣೆಯ ಪ್ರಮುಖ ಕೇಂದ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ.








