ವಾಷಿಂಗ್ಟನ್: ಇರಾನ್ ಮೇಲಿನ ಆರ್ಥಿಕ ಮತ್ತು ಮಿಲಿಟರಿ ಒತ್ತಡವನ್ನು ತೀವ್ರಗೊಳಿಸಿರುವ ಅಮೆರಿಕ, ಈಗ ತನ್ನ ಕಾರ್ಯಾಚರಣೆಯನ್ನು ಕೇವಲ ಪರ್ಷಿಯನ್ ಗಲ್ಫ್‌ಗೆ ಸೀಮಿತಗೊಳಿಸದೆ ವಿಶ್ವದಾದ್ಯಂತ ವಿಸ್ತರಿಸಿದೆ. ಇರಾನ್‌ಗೆ ಸಂಪರ್ಕ ಹೊಂದಿರುವ ಅಥವಾ ಇರಾನ್‌ಗೆ ನೆರವು ನೀಡುವ ಯಾವುದೇ ಹಡಗುಗಳನ್ನು ಎಲ್ಲಿ ಬೇಕಾದರೂ ತಡೆಯಲು ಮತ್ತು ವಶಪಡಿಸಿಕೊಳ್ಳಲು ತನ್ನ ಪಡೆಗಳಿಗೆ ಅಮೆರಿಕ ಮುಕ್ತ ಅವಕಾಶ ನೀಡಿದೆ.
ಅಮೆರಿಕದ ಜಂಟಿ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾದ ಜನರಲ್ ಡಾನ್ ಕೈನ್ ಪ್ರಕಾರ, ಈ ಕಾರ್ಯಾಚರಣೆಯು ಕೇವಲ ಇರಾನ್ ಬಂದರುಗಳಿಗೆ ಮಾತ್ರ ಸೀಮಿತವಾಗಿಲ್ಲ. ಪೆಸಿಫಿಕ್ ಸಾಗರ ಸೇರಿದಂತೆ ವಿಶ್ವದ ಯಾವುದೇ ಮೂಲೆಯಲ್ಲಿರುವ ಇರಾನ್ ಧ್ವಜ ಹೊತ್ತ ಹಡಗುಗಳನ್ನು ಅಮೆರಿಕದ ಪಡೆಗಳು ಬೆನ್ನಟ್ಟಲಿವೆ.
ಸುಮಾರು 10,000ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಮತ್ತು 16ಕ್ಕೂ ಹೆಚ್ಚು ಯುದ್ಧನೌಕೆಗಳು ಈ ಬೃಹತ್ ದಿಗ್ಬಂಧನ ಪ್ರಕ್ರಿಯೆಯಲ್ಲಿ ತೊಡಗಿವೆ. ಇರಾನ್‌ಗೆ ಆಯುಧಗಳು, ತೈಲ, ಲೋಹಗಳು ಅಥವಾ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸಾಗಿಸುವ ಯಾವುದೇ ಹಡಗನ್ನು ತಪಾಸಣೆ ಮಾಡುವ ಹಕ್ಕು ತಮಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಅಮೆರಿಕದ ಈ ಆದೇಶವನ್ನು ಉಲ್ಲಂಘಿಸಿ ಮುಂದೆ ಸಾಗಲು ಯತ್ನಿಸುವ ಹಡಗುಗಳ ಮೇಲೆ ಬಲಪ್ರಯೋಗ ಮಾಡಲಾಗುವುದು ಅಥವಾ ಹಡಗನ್ನು ವಶಕ್ಕೆ ಪಡೆಯಲಾಗುವುದು ಎಂದು ಯುಎಸ್ ಸೆಂಟ್ರಲ್ ಕಮಾಂಡ್ (CENTCOM) ರೇಡಿಯೋ ಮೂಲಕ ಎಚ್ಚರಿಕೆ ನೀಡಿದೆ.
ಈಗಾಗಲೇ 10ಕ್ಕೂ ಹೆಚ್ಚು ಹಡಗುಗಳನ್ನು ಅಮೆರಿಕದ ಪಡೆಗಳು ತಡೆದು ವಾಪಸ್ ಕಳುಹಿಸಿವೆ. ಇದರಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟುವ ಆತಂಕ ಎದುರಾಗಿದೆ.








