ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೋರ್ಮುಜ್ ಜಲಸಂಧಿಯಲ್ಲಿ ಇರಾನ್ ಹಡಗುಗಳ ವಿರುದ್ಧ ‘ನೌಕಾ ದಿಗ್ಬಂಧನ’ (Naval Blockade) ಘೋಷಿಸಿದ ಬೆನ್ನಲ್ಲೇ, ಭಾರತದಲ್ಲಿರುವ ಇರಾನ್ ದೂತಾವಾಸಗಳು ಸೋಶಿಯಲ್ ಮೀಡಿಯಾ ಮೂಲಕವೇ ಅಮೆರಿಕಕ್ಕೆ ತೀಕ್ಷ್ಣ ಮತ್ತು ವ್ಯಂಗ್ಯಭರಿತ ತಿರುಗೇಟು ನೀಡಿವೆ.
ಹೈದರಾಬಾದ್‌ನಲ್ಲಿರುವ ಇರಾನ್ ಕಾನ್ಸುಲೇಟ್ ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಅಮೆರಿಕದ ದಿಗ್ಬಂಧನವನ್ನು ಲೇವಡಿ ಮಾಡಿದೆ. “ಹೋರ್ಮುಜ್ ಜಲಸಂಧಿ ಎನ್ನುವುದು ಸೋಶಿಯಲ್ ಮೀಡಿಯಾ ಅಲ್ಲ; ಯಾರಾದರೂ ನಿಮ್ಮನ್ನು ಬ್ಲಾಕ್ ಮಾಡಿದರೆ, ನೀವು ಅವರನ್ನು ಮರಳಿ ಬ್ಲಾಕ್ ಮಾಡಲು ಸಾಧ್ಯವಿಲ್ಲ,” ಎಂದು ಪೋಸ್ಟ್ ಮಾಡಿದೆ. ಅಂದರೆ, ಸಮುದ್ರ ಮಾರ್ಗದಲ್ಲಿ ಅಮೆರಿಕ ವಿಧಿಸಿರುವ ಈ ತಡೆಯು ಅಷ್ಟು ಸುಲಭವಲ್ಲ ಮತ್ತು ಅದು ಪ್ರತಿರೋಧವನ್ನು ಎದುರಿಸಲಿದೆ ಎಂಬುದು ಇದರ ಒಳಾರ್ಥವಾಗಿದೆ.
ಇತ್ತ ಮುಂಬೈನಲ್ಲಿರುವ ಇರಾನ್ ಕಾನ್ಸುಲೇಟ್ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಾಲಿವುಡ್ ಸಿನಿಮಾಗಳ ಮೀಮ್ ಮತ್ತು ಡೈಲಾಗ್ ಬಳಸಿ ಅಮೆರಿಕವನ್ನು ಕಾಲೆಳೆದಿದೆ:
ಅಮೆರಿಕದ ದಿಗ್ಬಂಧನದ ನಡೆಯನ್ನು ಲೇವಡಿ ಮಾಡಲು 2007ರ ‘ಧಮಾಲ್’ ಸಿನಿಮಾದ ಹಾಸ್ಯ ದೃಶ್ಯವೊಂದನ್ನು ಬಳಸಿಕೊಳ್ಳಲಾಗಿದೆ.
ಶಾರುಖ್ ಖಾನ್ ಡೈಲಾಗ್: ಇರಾನ್ ನೌಕಾಪಡೆ ಮುಗಿದುಹೋಗಿದೆ ಎಂಬ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾನ್ಸುಲೇಟ್, “ಅಭಿ ತೋ ಸಿರ್ಫ್ ಟ್ರೈಲರ್ ಹೈ, ಪಿಕ್ಚರ್ ಅಭಿ ಬಾಕಿ ಹೈ” (ಇದು ಕೇವಲ ಟ್ರೈಲರ್ ಅಷ್ಟೇ, ಅಸಲಿ ಸಿನಿಮಾ ಇನ್ನು ಬಾಕಿಯಿದೆ) ಎಂದು ಶಾರುಖ್ ಖಾನ್ ಅವರ ಪ್ರಸಿದ್ಧ ಡೈಲಾಗ್ ಬಳಸಿ ಎಚ್ಚರಿಸಿದೆ.








