ಅಂಕಾರಾ: ಟರ್ಕಿಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೊಬ್ಬ ನಡೆಸಿದ ಮನಬಂದಂತೆ ಗುಂಡಿನ ದಾಳಿಯಿಂದಾಗಿ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಭೀಕರ ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದು, ದಾಳಿ ನಡೆಸಿದ ವಿದ್ಯಾರ್ಥಿಯು ನಂತರ ಅದೇ ಗನ್‌ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಟರ್ಕಿಯ ಇಸ್ತಾಂಬುಲ್‌ನ ಹೊರವಲಯದಲ್ಲಿರುವ ಪ್ರೌಢಶಾಲೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ತರಗತಿಗಳು ನಡೆಯುತ್ತಿದ್ದ ವೇಳೆ ಅನಿರೀಕ್ಷಿತವಾಗಿ ಒಳನುಗ್ಗಿದ ವಿದ್ಯಾರ್ಥಿಯು ತನ್ನ ಬಳಿಯಿದ್ದ ಶಸ್ತ್ರಾಸ್ತ್ರದಿಂದ ಗುಂಡು ಹಾರಿಸಲು ಶುರುಮಾಡಿದ್ದಾನೆ.
ದಾಳಿಯಲ್ಲಿ ಗಾಯಗೊಂಡ 16 ಮಂದಿಯಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದು, ಇಬ್ಬರು ಶಿಕ್ಷಕರಿಗೂ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ದಾಳಿ ನಡೆಸಿದ ಬಳಿಕ ಬೆದರಿದ ವಿದ್ಯಾರ್ಥಿಯು ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ತನ್ನನ್ನು ತಾನು ಶೂಟ್ ಮಾಡಿಕೊಂಡು ಮೃತಪಟ್ಟಿದ್ದಾನೆ.
ಪ್ರಾಥಮಿಕ ವರದಿಗಳ ಪ್ರಕಾರ, ದಾಳಿ ನಡೆಸಿದ ವಿದ್ಯಾರ್ಥಿಯು ಕಳೆದ ಕೆಲವು ದಿನಗಳಿಂದ ತೀವ್ರ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಶಾಲೆಯಲ್ಲಿ ನಡೆದ ಕೆಲವು ವೈಯಕ್ತಿಕ ಕಲಹಗಳು ಈ ಕೃತ್ಯಕ್ಕೆ ಪ್ರೇರಣೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.







