ನವದೆಹಲಿ: ದಶಕಗಳ ಕಾಲ ದೂರವಿದ್ದರೂ ದಂಪತಿಗಳಿಗೆ ವಿಚ್ಛೇದನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿರುವ ಅಪರೂಪದ ಘಟನೆಯೊಂದು ನಡೆದಿದೆ. “ಶಾಂತವಾಗಿರಿ, ತಿಂಗಳಿಗೆ 15,000 ರೂಪಾಯಿ ಜೀವನಾಂಶ ನೀಡುತ್ತಾ ಸುಖವಾಗಿರಿ” ಎಂದು 54 ವರ್ಷದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಕಿವಿಮಾತು ಹೇಳಿದೆ.
54 ವರ್ಷದ ವ್ಯಕ್ತಿಯೊಬ್ಬರು ತನ್ನ ಪತ್ನಿಯಿಂದ ಕಳೆದ 16 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ತಮಗೆ ವಿಚ್ಛೇದನ ನೀಡಬೇಕು ಮತ್ತು ತಾವು ಈಗಾಗಲೇ ಪತ್ನಿಗೆ ನೀಡುತ್ತಿರುವ ತಿಂಗಳಿಗೆ 15,000 ರೂ. ಜೀವನಾಂಶವೇ ತಮಗೆ ಹೊರೆಯಾಗುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
“ನಿಮ್ಮ ಪತ್ನಿ ನಿಮ್ಮೊಂದಿಗೆ ವಾಸಿಸಲು ಸಿದ್ಧರಿದ್ದಾರೆ, ನೀವೇಕೆ ಅವರನ್ನು ಕರೆದುಕೊಂಡು ಹೋಗಬಾರದು? ಏನಿದೆ ಸಮಸ್ಯೆ?” ಎಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಪ್ರಶ್ನಿಸಿತು.”ನಮ್ಮ ನಡುವೆ ಹೊಂದಾಣಿಕೆಯಿಲ್ಲ, 16 ವರ್ಷಗಳಿಂದ ದೂರವಿದ್ದೇವೆ. ನನ್ನ ಸಂಬಳ 65,000 ರೂ. ಮಾತ್ರ, ನನಗೆ ಪೆನ್ಷನ್ ಕೂಡ ಇಲ್ಲ. 15,000 ರೂ. ಜೀವನಾಂಶ ನೀಡುವುದೇ ಕಷ್ಟವಾಗಿದೆ” ಎಂದು ಪತಿ ಅಳಲು ತೋಡಿಕೊಂಡರು.
ಇಂದಿನ ದಿನಗಳಲ್ಲಿ 15,000 ರೂ. ದೊಡ್ಡ ಮೊತ್ತವೇನಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. “ಒಂದೇ ಬಾರಿಗೆ ಇತ್ಯರ್ಥ ಮಾಡುವ ದೊಡ್ಡ ಮೊತ್ತದ (Permanent Alimony) ಆಫರ್ ನೀಡಿದ್ದರೆ ನಾವು ವಿಚ್ಛೇದನ ಪರಿಗಣಿಸುತ್ತಿದ್ದೆವು. ಇಲ್ಲವಾದರೆ ಸುಮ್ಮನೆ 15,000 ರೂ. ನೀಡುತ್ತಾ ಇರಿ” ಎಂದು ಹೇಳಿತು.
ವೈವಾಹಿಕ ಸಂಬಂಧಗಳು ಸಂಪೂರ್ಣವಾಗಿ ಮುರಿದುಹೋಗಿವೆ ಎಂದು ಸಾಬೀತಾಗದ ಹೊರತು ಅಥವಾ ಪತ್ನಿಯ ಒಪ್ಪಿಗೆಯಿಲ್ಲದೆ ಕೇವಲ ‘ಹೊಂದಾಣಿಕೆಯಿಲ್ಲ’ ಎಂಬ ಕಾರಣಕ್ಕೆ ವಿಚ್ಛೇದನ ನೀಡಲು ನ್ಯಾಯಾಲಯ ಒಪ್ಪಲಿಲ್ಲ. ಪತ್ನಿಯು ಪತಿಯೊಂದಿಗೆ ವಾಸಿಸಲು ಇಂದಿಗೂ ಇಚ್ಛೆ ವ್ಯಕ್ತಪಡಿಸುತ್ತಿರುವುದರಿಂದ, ವಿಚ್ಛೇದನ ನೀಡುವ ಬದಲು ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸಲು ಕೋರ್ಟ್ ಸೂಚಿಸಿದೆ.








