ವಾಷಿಂಗ್ಟನ್: ಅಮೆರಿಕದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ಕುಖ್ಯಾತ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೊತೆಗಿನ ತಮ್ಮ ಸಂಬಂಧದ ಕುರಿತು ಹರಡುತ್ತಿರುವ ವದಂತಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಅವರು, ತಾನು ಎಪ್ಸ್ಟೀನ್ನ “ಸಂತ್ರಸ್ತೆ” ಅಥವಾ ಆತನೊಂದಿಗೆ ಯಾವುದೇ ರೀತಿಯ ವಹಿವಾಟು ಹೊಂದಿದ್ದವಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ರಾಜಕೀಯ ವಲಯಗಳಲ್ಲಿ ಮೆಲಾನಿಯಾ ಅವರ ಹಿಂದಿನ ಮಾಡೆಲಿಂಗ್ ದಿನಗಳ ಬಗ್ಗೆ ಮತ್ತು ಎಪ್ಸ್ಟೀನ್ ಜೊತೆಗಿನ ಲಿಂಕ್ ಬಗ್ಗೆ ಚರ್ಚೆಗಳು ಶುರುವಾಗಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಮೆಲಾನಿಯಾ:
”ನನ್ನ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರಲಾಗುತ್ತಿದೆ.ನಾನು ಜೆಫ್ರಿ ಎಪ್ಸ್ಟೀನ್ನ ಸಂತ್ರಸ್ತೆಯಲ್ಲ ಮತ್ತು ಆತನ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೂ ನನಗೂ ಸಂಬಂಧವಿಲ್ಲ.ನಾನು ಅಮೆರಿಕಕ್ಕೆ ಕಾನೂನುಬದ್ಧವಾಗಿ ಬಂದಿದ್ದೇನೆ ಮತ್ತು ನನ್ನ ಸ್ವಂತ ಶ್ರಮದಿಂದ ವೃತ್ತಿಜೀವನ ರೂಪಿಸಿಕೊಂಡಿದ್ದೇನೆ” ಎಂದು ತಿಳಿಸಿದ್ದಾರೆ.
ಜೇಮ್ಸ್ ಕಾರ್ವಿಲ್ಲೆ ಅಂತಹ ರಾಜಕೀಯ ತಂತ್ರಜ್ಞರು ಮೆಲಾನಿಯಾ ಅವರು ಅಮೆರಿಕಕ್ಕೆ ಬಂದ ಆರಂಭದ ದಿನಗಳಲ್ಲಿ ಎಪ್ಸ್ಟೀನ್ ಏಜೆನ್ಸಿಯ ಮೂಲಕವೇ ಡೊನಾಲ್ಡ್ ಟ್ರಂಪ್ರನ್ನು ಭೇಟಿಯಾಗಿದ್ದರು ಎಂಬ ಸಿದ್ಧಾಂತವನ್ನು ಮಂಡಿಸಿದ್ದರು. ಈ ಹೇಳಿಕೆಗಳು ವೈರಲ್ ಆದ ಬೆನ್ನಲ್ಲೇ ಮೆಲಾನಿಯಾ ಈಗ ಮೌನ ಮುರಿದಿದ್ದಾರೆ.








