ಇಸ್ಲಾಮಾಬಾದ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವು ನಿರ್ಣಾಯಕ ಪಾತ್ರ ವಹಿಸಿದ್ದೇವೆ ಎಂದು ಪ್ರತಿಪಾದಿಸಿರುವ ಪಾಕಿಸ್ತಾನ ಸರ್ಕಾರ, ಈ ಸಾಧನೆಗಾಗಿ ತನಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದೆ. ಈ ಕುರಿತು ಪಾಕಿಸ್ತಾನದ ಸಂಸತ್ತಿನಲ್ಲಿ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರದ ಈ ನಡೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಪಶ್ಚಿಮ ಏಷ್ಯಾದಲ್ಲಿ ಭೀಕರ ಯುದ್ಧದ ಕಾರ್ಮೋಡ ಕವಿದಿದ್ದಾಗ, ಇಸ್ಲಾಮಾಬಾದ್ನಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ರಹಸ್ಯ ಮಾತುಕತೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ನಾವು ಎಂದು ಪಾಕಿಸ್ತಾನ ಹೇಳಿಕೊಂಡಿದೆ.”ನಮ್ಮ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ಜಗತ್ತು ಮತ್ತೊಂದು ಮಹಾಯುದ್ಧದಿಂದ ಪಾರಾಗಿದೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್ ಮತ್ತು ಅಮೆರಿಕದ ನಡುವೆ ಸಂಧಾನಕಾರನಾಗಿ ಕೆಲಸ ಮಾಡಿರುವುದಕ್ಕೆ ಜಾಗತಿಕ ಮನ್ನಣೆ ಸಿಗಬೇಕು ಎಂಬುದು ಪಾಕ್ ಸಂಸದರ ವಾದವಾಗಿದೆ.
ಪಾಕಿಸ್ತಾನವು ತನ್ನನ್ನು ತಾನು ‘ಶಾಂತಿ ದೂತ’ ಎಂದು ಕರೆದುಕೊಳ್ಳುತ್ತಿರುವುದನ್ನು ಹಲವು ದೇಶಗಳು ಲೇವಡಿ ಮಾಡಿವೆ.
ವಿರೋಧ: ಒಂದು ಕಡೆ ಇಸ್ರೇಲ್ ವಿರುದ್ಧ ಕಟು ಭಾಷೆ ಬಳಸಿ ಉದ್ವಿಗ್ನತೆ ಹೆಚ್ಚಿಸುತ್ತಾ, ಮತ್ತೊಂದೆಡೆ ಶಾಂತಿ ಪ್ರಶಸ್ತಿ ಕೇಳುತ್ತಿರುವುದು ಪಾಕಿಸ್ತಾನದ ದ್ವಂದ್ವ ನೀತಿ ಎಂದು ವಿಶ್ಲೇಷಕರು ಟೀಕಿಸಿದ್ದಾರೆ.








