ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ಕಾಡಾನೆಗಳ ನಡುವಿನ ಸಂಘರ್ಷ ಮುಂದುವರೆದಿದ್ದು, ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪೊನ್ನಂಪೇಟೆ ತಾಲೂಕಿನ ಕಾಯಿಮಾನಿಯಲ್ಲಿ ನಡೆದಿದೆ.
ಕಾಯಿಮಾನಿ ನಿವಾಸಿ ರತ್ತು ಮೃತಪಟ್ಟ ದುರ್ದೈವಿ. ಇವರು ಎಂದಿನಂತೆ ತಮ್ಮ ಕಾಫಿ ತೋಟದ ಕೆಲಸಕ್ಕೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ನಡೆದಿದ್ದೇನು?
ರತ್ತು ಅವರು ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ಕಾಡಾನೆಯೊಂದು ಎದುರಾಗಿದೆ. ತಪ್ಪಿಸಿಕೊಳ್ಳುವ ಮೊದಲೇ ಆನೆ ರತ್ತು ಅವರ ಮೇಲೆ ದಾಳಿ ನಡೆಸಿ, ಕಾಲಿನಿಂದ ತುಳಿದು ಸಾಯಿಸಿದೆ. ಆನೆಯ ಭೀಕರ ದಾಳಿಯಿಂದಾಗಿ ತೀವ್ರವಾಗಿ ಗಾಯಗೊಂಡ ರತ್ತು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೀಡು ಬಿಟ್ಟಿವೆ 8-10 ಆನೆಗಳ ಹಿಂಡು:
ಕಳೆದ ಕೆಲವು ದಿನಗಳಿಂದ ಶ್ರೀಮಂಗಲ ಹೋಬಳಿಯ ಕಿರ್ಚಿ ಹಾಗೂ ಕಾಯಿಮಾನಿ ಭಾಗದಲ್ಲಿ 8 ರಿಂದ 10 ಕಾಡಾನೆಗಳ ಹಿಂಡು ಬೀಡು ಬಿಟ್ಟಿದೆ. ಇದರಿಂದಾಗಿ ಸ್ಥಳೀಯ ನಿವಾಸಿಗಳು ಮತ್ತು ತೋಟದ ಕಾರ್ಮಿಕರು ಕೆಲಸಕ್ಕೆ ಹೋಗಲು ಜೀವಭಯ ಪಡುವಂತಾಗಿದೆ. ಕಾಡಾನೆಗಳ ನಿರಂತರ ಸಂಚಾರದಿಂದಾಗಿ ಜನರು ಮನೆಯಿಂದ ಹೊರಬರಲು ಆತಂಕಪಡುತ್ತಿದ್ದಾರೆ.
ಗ್ರಾಮಸ್ಥರ ಆಕ್ರೋಶ ಮತ್ತು ಒತ್ತಾಯ:
ಘಟನೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಕಿಡಿಕಾರಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಗ್ರಾಮದ ಸುತ್ತಮುತ್ತಲ ತೋಟಗಳಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಕಾಡಿಗೆ ಅಟ್ಟಬೇಕು ಎಂದು ಒತ್ತಾಯಿಸಿದ್ದಾರೆ. ಪದೇ ಪದೇ ಇಂತಹ ಘಟನೆಗಳು ನಡೆಯುತ್ತಿದ್ದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಆನೆ ದಾಳಿಗೆ ಕಾಫಿ ಬೆಳೆಗಾರ ಸಾವು: ಈಶ್ವರ ಖಂಡ್ರೆ ಸಂತಾಪ
ಇಂದು ಮಡಿಕೇರಿಯಲ್ಲಿ ಕಾಡಾನೆ ದಾಳಿಯಿಂದ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ. ಮಾನವ- ಆನೆ ಸಂಘರ್ಷ ತಡೆಯಲು ಸರ್ಕಾರ ಮತ್ತು ಇಲಾಖೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತಿದೆ. ಜೀವಕ್ಕೆ ಬೆಲೆ ನೀಡಲು ಸಾಧ್ಯವೆ ಇಲ್ಲ. ಈ ನೋವಿನ ಸಂದರ್ಭದಲ್ಲಿ ನೊಂದ ಕುಟುಂಬದ ಜೊತೆ ಸರ್ಕಾರ ಇದೆ ಎಂದು ಹೇಳಿದರು.
ಆನೆಗಳ ಸಮಸ್ಯೆ ಪರಿಹರಿಸಲು ಆನೆ ಧಾಮ ಮಾಡುವ ಬಗ್ಗೆ ಸರ್ಕಾರ ಯೋಜನೆ ರೂಪಿಸಿತ್ತು. ಅದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ ಸಿಗುವಲ್ಲಿ ತೊಡಕಾಗಿದೆ. ಈ ಸಮಸ್ಯೆ ಪರಿಹರಿಸಿಕೊಂಡು ಆನೆ ಧಾಮ ನಿರ್ಮಾಣದ ಬಗ್ಗೆ ಕ್ರಮ ವಹಿಸಲಾಗುವುದು ಎಂದರು.
ಬೆಳಗಾವಿಯಲ್ಲಿ ಭೀಕರ ಮರ್ಡರ್: ಹಳೆ ವೈಷಮ್ಯ, ರಾಜಕೀಯ ವಿರೋಧಕ್ಕೆ ಜಾತ್ರೆಯಲ್ಲೇ ವ್ಯಕ್ತಿ ಕಗ್ಗೊಲೆ








