ಬೆಂಗಳೂರು : ಬೆಂಗಳೂರಲ್ಲಿ ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ ಕೆ.ಆರ್. ಪುರ ಶಾಸಕ ಬೈರತಿ ಬಸವರಾಜ್ ಅವರಿಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ರದ್ದುಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸಿದೆ.
ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 2026ರ ಮಾ.12ರಂದು ಹೊರಡಿಸಿದ ಆದೇಶ ರದ್ದು ಕೋರಿ ಸಿಐಡಿ ತನಿಖಾಧಿಕಾರಿಯು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್. ಪುರ ಶಾಸಕ ಬಿ.ಎ.ಬಸವರಾಜ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಪ್ರಕರಣ ಸಂಬಂಧ ಈವರೆಗೂ ತನಿಖೆ ಪೂರ್ಣಗೊಂಡಿಲ್ಲ. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಆರೋಪಿಗೆ ಜಾಮೀನು ನೀಡಲಾಗಿದೆ. ಇದರಿಂದಾಗಿ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗದಂತಾಗಿದೆ. ಆದ್ದರಿಂದ ಆರೋಪಿಯ ಜಾಮೀನು ರದ್ದು ಮಾಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.








