ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತು ತೀವ್ರ ಉದ್ವಿಗ್ನತೆ ನೆಲೆಯೂರಿರುವ ನಡುವೆಯೇ, ಭಾರತದ ಧ್ವಜ ಹೊಂದಿರುವ ‘ಗ್ರೀನ್ ಆಶಾ’ (Green Asha) ಎಂಬ ಎಲ್ಪಿಜಿ (LPG) ಸಾಗಣೆ ನೌಕೆಯು ಆಯಕಟ್ಟಿನ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ.
ಫೆಬ್ರವರಿ 28ರಂದು ಇರಾನ್ ಮತ್ತು ಇಸ್ರೇಲ್-ಅಮೆರಿಕ ನಡುವೆ ಸಂಘರ್ಷ ಆರಂಭವಾದ ನಂತರ, ಈ ಅಪಾಯಕಾರಿ ಜಲಮಾರ್ಗವನ್ನು ಯಶಸ್ವಿಯಾಗಿ ಕ್ರಮಿಸಿದ ಭಾರತದ ಎಂಟನೇ ಎಲ್ಪಿಜಿ ನೌಕೆ ಇದಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಬಿಕ್ಕಟ್ಟಿನ ಕಾರಣದಿಂದಾಗಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದರೂ, ಭಾರತದ ರಾಜತಾಂತ್ರಿಕ ಪ್ರಯತ್ನಗಳಿಂದಾಗಿ ‘ಗ್ರೀನ್ ಆಶಾ’ ಸುಸೂತ್ರವಾಗಿ ಸಾಗಿದೆ.
ನೌಕಾಪಡೆಯ ಕಾವಲು: ಈ ಭಾಗದಲ್ಲಿ ಸಂಚರಿಸುವ ಭಾರತೀಯ ವ್ಯಾಪಾರ ನೌಕೆಗಳಿಗೆ ರಕ್ಷಣೆ ನೀಡಲು ಮತ್ತು ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ನೌಕಾಪಡೆಯ ಯುದ್ಧನೌಕೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು.
ಕಳೆದ ಶುಕ್ರವಾರವಷ್ಟೇ ‘ಗ್ರೀನ್ ಸಾನ್ವಿ’ (Green Sanvi) ಎಂಬ ನೌಕೆ 46,650 ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತು ಈ ಮಾರ್ಗವನ್ನು ದಾಟಿತ್ತು. ಇದೀಗ ಗ್ರೀನ್ ಆಶಾ ಕೂಡ ಸೇರಿಕೊಂಡಿದೆ. ವರದಿಗಳ ಪ್ರಕಾರ, ಸದ್ಯ ಈ ಭಾಗದಲ್ಲಿ ಭಾರತದ ‘ಜಗ್ ವಿಕ್ರಮ್’ (Jag Vikram) ಎಂಬ ನೌಕೆ ಮಾತ್ರ ಬಾಕಿ ಉಳಿದಿದ್ದು, ಅದು ಕೂಡ ಶೀಘ್ರದಲ್ಲೇ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ.








