ಫ್ಲೋರಿಡಾ (ಯುಎಸ್ಎ):ಮಾನವ ಇತಿಹಾಸದಲ್ಲೇ ಅತಿ ಹೆಚ್ಚು ದೂರದ ಬಾಹ್ಯಾಕಾಶ ಪ್ರಯಾಣ ಬೆಳೆಸಿದ ದಾಖಲೆಯನ್ನು ಬರೆಯಲು ನಾಸಾದ ‘ಆರ್ಟೆಮಿಸ್ II’ (Artemis II) ನೌಕೆ ಸಜ್ಜಾಗಿದೆ. ಚಂದಿರನ ಸನಿಹಕ್ಕೆ ಹೋಗುವ ಈ ಮಿಷನ್, 1970ರಲ್ಲಿ ಅಪೊಲೊ 13 ನಿರ್ಮಿಸಿದ್ದ ದಾಖಲೆಯನ್ನು ಮುರಿಯುವ ಮೂಲಕ ಮಾನವಸಹಿತ ಬಾಹ್ಯಾಕಾಶ ಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.
ಈ ಮಿಷನ್‌ನಲ್ಲಿ ನಾಲ್ವರು ಗಗನಯಾತ್ರಿಗಳು ಭೂಮಿಯಿಂದ ಸುಮಾರು 4,06,773 ಕಿಲೋಮೀಟರ್ (2,52,757 ಮೈಲಿ) ದೂರದವರೆಗೆ ಪ್ರಯಾಣಿಸಲಿದ್ದಾರೆ. ಇದು 1970ರ ಅಪೊಲೊ 13 ಮಿಷನ್ ತಲುಪಿದ್ದ (4,00,171 ಕಿ.ಮೀ) ದೂರಕ್ಕಿಂತ ಸುಮಾರು 6,602 ಕಿ.ಮೀ ಹೆಚ್ಚು.
ಆರ್ಟೆಮಿಸ್ II ನೌಕೆಯು ಚಂದಿರನ ಮೇಲ್ಮೈಗೆ ಇಳಿಯುವುದಿಲ್ಲ, ಬದಲಿಗೆ ಚಂದಿರನ ಹಿಂಭಾಗವನ್ನು (Far side of the Moon) ಸುತ್ತುವರಿದು ಮರಳಿ ಬರಲಿದೆ. ಈ ವೇಳೆ ಗಗನಯಾತ್ರಿಗಳು ಚಂದಿರನ ಅತ್ಯಂತ ಸಮೀಪದ ಮತ್ತು ಅಪರೂಪದ ದೃಶ್ಯಗಳನ್ನು ಕಣ್ಣಾರೆ ಕಾಣಲಿದ್ದಾರೆ.
ಈ ಐತಿಹಾಸಿಕ ಯಾನದಲ್ಲಿ ರೀಡ್ ವೈಸ್‌ಮನ್ (ಕಮಾಂಡರ್), ವಿಕ್ಟರ್ ಗ್ಲೋವರ್ (ಪೈಲಟ್), ಕ್ರಿಸ್ಟಿನಾ ಕೋಚ್ ಮತ್ತು ಜೆರೆಮಿ ಹ್ಯಾನ್ಸೆನ್ ಅವರು ಪ್ರಯಾಣಿಸುತ್ತಿದ್ದಾರೆ. ಇವರಲ್ಲಿ ಕ್ರಿಸ್ಟಿನಾ ಕೋಚ್ ಅವರು ಚಂದಿರನ ಕಕ್ಷೆಗೆ ಹೋದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.ಈ 10 ದಿನಗಳ ಮಿಷನ್‌ನ ಮುಖ್ಯ ಉದ್ದೇಶವೆಂದರೆ, ಮುಂದಿನ ದಿನಗಳಲ್ಲಿ ಮನುಷ್ಯನನ್ನು ಚಂದಿರನ ಮೇಲೆ ಇಳಿಸಲು ಬೇಕಾದ ‘ಓರಿಯನ್’ (Orion) ನೌಕೆ ಮತ್ತು ಜೀವ ರಕ್ಷಣಾ ವ್ಯವಸ್ಥೆಗಳನ್ನು ಪರೀಕ್ಷಿಸುವುದಾಗಿದೆ.








