ಬೆಂಗಳೂರು: ರಾಜ್ಯದ ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ದಶಕಗಳ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ನೌಕರರ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಹೊಸ ‘ಮಾನವ ಸಂಪನ್ಮೂಲ ನೀತಿ’ (HR Policy) ಜಾರಿಗೊಳಿಸುವ ಪ್ರಕ್ರಿಯೆ ಪ್ರಸ್ತುತ ಪರಿಶೀಲನೆಯಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಪ್ರಸ್ತುತ ರಾಜ್ಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಒಟ್ಟು 28,466 ಸಿಬ್ಬಂದಿಗಳು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ.
ವರ್ಗಾವಣೆ ನೀತಿ: ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿರುವ ಈ ಸಿಬ್ಬಂದಿಗಳಿಗೆ ಕಡ್ಡಾಯ ವರ್ಗಾವಣೆ ಮಾಡಿದರೆ ಕುಟುಂಬ ನಿರ್ವಹಣೆ ಕಷ್ಟವಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು, ಅವರಿಗಾಗಿ ಪ್ರತ್ಯೇಕ ಮಾನವ ಸಂಪನ್ಮೂಲ ನೀತಿಯನ್ನು ರೂಪಿಸಲು ಸರ್ಕಾರ ಮುಂದಾಗಿದೆ.
ವೇತನ ಹೆಚ್ಚಳದ ಸ್ಥಿತಿ: ನೌಕರರು ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದರೂ, ಸದ್ಯಕ್ಕೆ ವೇತನ ಹೆಚ್ಚಳದ ಬಗ್ಗೆ ಸರ್ಕಾರದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನೌಕರರ ಸಂಕಷ್ಟಕ್ಕೆ ಸ್ಪಂದನೆ:
ಕಡಿಮೆ ವೇತನದಲ್ಲಿ ಕೆಲಸ ಮಾಡುವ ನೌಕರರಿಗೆ ವರ್ಗಾವಣೆ ಪ್ರಕ್ರಿಯೆಗಳು ಹೊರೆಯಾಗದಂತೆ ನೋಡಿಕೊಳ್ಳಲು ಮತ್ತು ಅವರ ಸೇವೆಯನ್ನು ವ್ಯವಸ್ಥಿತಗೊಳಿಸಲು ಈ ಹೊಸ ನೀತಿ ಪೂರಕವಾಗಲಿದೆ ಎಂದು ಹೇಳಲಾಗುತ್ತಿದೆ. ಈ ಕುರಿತಾದ ಕಡತವು ಪ್ರಸ್ತುತ ಪರಿಶೀಲನಾ ಹಂತದಲ್ಲಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.









