ವಿಯೆನ್ನಾ: ಇರಾನ್ನ ದಕ್ಷಿಣ ಕರಾವಳಿಯಲ್ಲಿರುವ ಬೂಶೆಹರ್ ಅಣು ವಿದ್ಯುತ್ ಸ್ಥಾವರದ (Bushehr Nuclear Plant) ಮೇಲೆ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ನಡೆಸುತ್ತಿರುವ ಸತತ ದಾಳಿಗಳು ಇಡೀ ಪಶ್ಚಿಮ ಏಷ್ಯಾವನ್ನು ಅಣು ವಿಕಿರಣದ ಅಪಾಯಕ್ಕೆ ತಳ್ಳಿವೆ. “ಈ ದಾಳಿಗಳು ಮುಂದುವರಿದರೆ ಸಂಭವಿಸಬಹುದಾದ ‘ವಿಕಿರಣ ಸೋರಿಕೆ’ (Radioactive Fallout) ಕೇವಲ ಟೆಹ್ರಾನ್ ಮಾತ್ರವಲ್ಲದೆ, ಇಡೀ ಗಲ್ಫ್ ರಾಷ್ಟ್ರಗಳ ರಾಜಧಾನಿಗಳನ್ನೇ ನಾಶಪಡಿಸಲಿದೆ” ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಗಂಭೀರ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಬೆಳಿಗ್ಗೆ ನಡೆದ ದಾಳಿಯು ಬೂಶೆಹರ್ ಸ್ಥಾವರದ ಹತ್ತಿರ ನಡೆದ ನಾಲ್ಕನೇ ದಾಳಿಯಾಗಿದೆ. ಈ ದಾಳಿಯಲ್ಲಿ ಸ್ಥಾವರದ ಭದ್ರತಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದು, ಪೂರಕ ಕಟ್ಟಡವೊಂದಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ.
ಸದ್ಯಕ್ಕೆ ವಿಕಿರಣ ಸೋರಿಕೆಯಾದ ಬಗ್ಗೆ ಯಾವುದೇ ಕುರುಹುಗಳಿಲ್ಲ ಎಂದು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ತಿಳಿಸಿದೆ. ಆದರೆ, ದಾಳಿಗಳು ಸ್ಥಾವರದ ಮುಖ್ಯ ರಿಯಾಕ್ಟರ್ಗೆ ತಗುಲಿದರೆ ಚೆರ್ನೋಬಿಲ್ ಮಾದರಿಯ ಭೀಕರ ದುರಂತ ಸಂಭವಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಬೂಶೆಹರ್ ಸ್ಥಾವರದ ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ತೊಡಗಿದ್ದ ಸುಮಾರು 200ಕ್ಕೂ ಹೆಚ್ಚು ರಷ್ಯಾ ಮೂಲದ ಸಿಬ್ಬಂದಿಗಳನ್ನು ರಷ್ಯಾ ಸರ್ಕಾರವು ತುರ್ತಾಗಿ ಅಲ್ಲಿಂದ ಸ್ಥಳಾಂತರಿಸಿದೆ.ಬೂಶೆಹರ್ ಸ್ಥಾವರವು ಇರಾನ್ನ ರಾಜಧಾನಿ ಟೆಹ್ರಾನ್ಗಿಂತ ಕುವೈತ್, ಬಹ್ರೇನ್ ಮತ್ತು ಕತಾರ್ ದೇಶಗಳಿಗೆ ಹೆಚ್ಚು ಸಮೀಪದಲ್ಲಿದೆ. ಹೀಗಾಗಿ ವಿಕಿರಣ ಸೋರಿಕೆಯಾದರೆ ಅದರ ಮೊದಲ ಹೊಡೆತ ಈ ನೆರೆಹೊರೆಯ ರಾಷ್ಟ್ರಗಳ ಮೇಲೆ ಬೀಳಲಿದೆ ಎಂದು ಇರಾನ್ ಎಚ್ಚರಿಸಿದೆ.








