ಟೆಹ್ರಾನ್: ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕಠಿಣ ಎಚ್ಚರಿಕೆ ನೀಡಿದ್ದ ಕೆಲವೇ ಗಂಟೆಗಳಲ್ಲಿ ಅಮೆರಿಕದ ಸೇನೆಯು ಇರಾನ್ ಮೇಲೆ ‘ಬೃಹತ್ ವೈಮಾನಿಕ ದಾಳಿ’ (Massive Strike) ನಡೆಸಿದೆ. ಈ ದಾಳಿಯಲ್ಲಿ ಇರಾನ್ನ ಪ್ರಮುಖ ಸೇನಾ ನಾಯಕರು ಹತರಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಘೋಷಿಸಿದ್ದಾರೆ.
ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಿರಿಯ ಕಮಾಂಡರ್ಗಳು ಸಭೆ ನಡೆಸುತ್ತಿದ್ದ ಗುಪ್ತ ಸಂಕೀರ್ಣಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ದಾಳಿಗೆ ಅತ್ಯಾಧುನಿಕ ‘ಬಂಕರ್ ಬಸ್ಟರ್’ ಬಾಂಬ್ಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.
“ಇರಾನ್ ನಮ್ಮ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಅಸಹಾಯಕತೆ ಎಂದು ಲೇವಡಿ ಮಾಡಿತ್ತು. ಈಗ ಅವರಿಗೆ ಅಮೆರಿಕದ ಶಕ್ತಿ ಏನೆಂದು ಅರ್ಥವಾಗಿರಬಹುದು. ನಮ್ಮ ಹಡಗುಗಳಿಗೆ ಮತ್ತು ಸೈನಿಕರಿಗೆ ತೊಂದರೆ ನೀಡುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ” ಎಂದು ಟ್ರಂಪ್ ಗುಡುಗಿದ್ದಾರೆ.
ದಾಳಿಯಲ್ಲಿ ಇರಾನ್ನ ಕನಿಷ್ಠ ಐವರು ಉನ್ನತ ಮಟ್ಟದ ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಮತ್ತು ಹತ್ತಾರು ಸೈನಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಟೆಹ್ರಾನ್ ಮತ್ತು ಇಸ್ಫಹಾನ್ ಪ್ರಾಂತ್ಯಗಳಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ.








